DistrictsKarnatakaLatestLeading NewsMain PostUdupi

ನೀರಿನ ರಭಸಕ್ಕೆ ಕೊಚ್ಚಿ ಹೋದ ಬಾಲಕಿ – ಅಗ್ನಿಶಾಮಕ, ಸ್ಥಳೀಯರಿಂದ ಹುಡುಕಾಟ

ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಮಳೆ ಅವಾಂತರ ಮುಂದುವರೆದಿದೆ. ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಮತ್ತು ನೆರೆಗೆ ತುತ್ತಾಗಿರುವ ಬೈಂದೂರು ತಾಲೂಕಿನಲ್ಲಿ ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ 2ನೇ ತರಗತಿ ವಿದ್ಯಾರ್ಥಿನಿ ಹೊಳೆಯ ನೀರಿನಲ್ಲಿ ಕೊಚ್ಚಿಹೋಗಿದ್ದಾಳೆ. ಸಂಪರ್ಕ ಸೇತುವೆ ಇಲ್ಲದಿರೋದೆ ದುರ್ಘಟನೆಗೆ ಕಾರಣವಾಗಿದೆ.

ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದಲ್ಲಿ ದುರ್ಘಟನೆಯೊಂದು ನಡೆದಿದೆ. ಸನ್ನಿಧಿ ನೀರುಪಾಲಾದ ದುರ್ದೈವಿ. ಸನ್ನಿಧಿ ಎರಡನೇ ತರಗತಿ ವಿದ್ಯಾರ್ಥಿನಿ. ಶಾಲೆ ಬಿಟ್ಟು ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಕಾಲುಸಂಕ ದಾಟುವಾಗ ಆಯತಪ್ಪಿ ಬಿದ್ದಿದ್ದಾಳೆ. ಸುತ್ತಮುತ್ತಲಿದ್ದವರು ಬರುವ ವೇಳೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾಳೆ. ಇದನ್ನೂ ಓದಿ: ನನ್ನ ಚುನಾವಣಾ ಸ್ಪರ್ಧೆ ಬಗ್ಗೆ ಪಕ್ಷ ತೀರ್ಮಾನಿಸುತ್ತೆ: ವಿಜಯೇಂದ್ರ

ಬೊಳಂಬಳ್ಳಿಯ ಮಕ್ಕಿಮನೆ ಮನೆ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ಅವರ ಪುತ್ರಿ ಸನ್ನಿಧಿಗಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆದರೂ ಪತ್ತೆಯಾಗಿಲ್ಲ. ಚಪ್ಪರಿಕೆ ಎಂಬಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಸನ್ನಿಧಿ ಸೋಮವಾರ ಮನೆಗೆ ಆಯಾ ಜೊತೆ ವಾಪಾಸ್ಸಾಗುವಾಗ ಬೀಜಮಕ್ಕಿ ಎಂಬಲ್ಲಿ ಅವಘಡವಾಗಿದೆ. ಸ್ಥಳಕ್ಕೆ ಬೈಂದೂರು ಶಾಸಕರಾದ ಬಿ.ಎಂ.ಸುಕುಮಾರ್ ಶೆಟ್ಟಿ ಭೇಟಿ ಕೊಟ್ಟು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಪ್ರಸ್ತುತ ನೀರಿನಲ್ಲಿ ಕೊಚ್ಚಿ ಹೋದ ಸನ್ನಿಧಿಗಾಗಿ ಅಗ್ನಿಶಾಮಕ ಮತ್ತು ಸ್ಥಳೀಯರಿಂದ ಭಾರೀ ಹುಡುಕಾಟ ನಡೆಯುತ್ತಿದೆ. ಆದರೂ ಇನ್ನೂ ಸನ್ನಿಧಿ ಸಿಕ್ಕಿಲ್ಲ.

ಉಡುಪಿ ಜಿಲ್ಲೆಯಲ್ಲೇ ಬೈಂದೂರು ಅತಿ ಹೆಚ್ಚು ಬಾರಿ ನೆರೆಗೆ ತುತ್ತಾದ ತಾಲೂಕು. ನದಿ ತೊರೆಗಳ ಕವಲುಗಳು, ಕುದ್ರು ಪ್ರದೇಶ ಹೆಚ್ಚಿರುವ ಕಾರಣ ತಾಲೂಕಿನ ಜನ ಮಳೆಗಾಲದಲ್ಲಿ ವಿಪರೀತ ಸಮಸ್ಯೆಗೆ ಒಳಗಾಗುತ್ತಾರೆ. ಶಾಲಾ ಮಕ್ಕಳಂತು ಬಹಳ ಕಷ್ಟಪಟ್ಟು ಓಡಾಡಬೇಕಾದ ಪರಿಸ್ಥಿತಿಯಿದೆ. ಸಂಪರ್ಕ ಸೇತುವೆಗಳು, ಕಿಂಡಿ ಅಣೆಕಟ್ಟು ರಸ್ತೆಗಳು ನಿರ್ಮಾಣ ಶೀಘ್ರ ಆಗಬೇಕಿದೆ. ಇದನ್ನೂ ಓದಿ: 1,019 ಮಂದಿಗೆ ಕೊರೊನಾ – 1,662 ಮಂದಿ ಡಿಸ್ಚಾರ್ಜ್ 

Live Tv

Leave a Reply

Your email address will not be published.

Back to top button