ಚಿತ್ರದುರ್ಗ: ಎಲ್ಲಾ ಅಂಗಾಂಗಗಳು ಸರಿ ಇದ್ದರೂ ವಿದ್ಯಾರ್ಥಿಗಳು ಓದೋದು ಕಷ್ಟ. ಆದರೆ ಡೌನ್ ಸಿಂಡ್ರೋಮ್ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಯೊಬ್ಬಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇಕಡ 80 ಅಂಕಗಳನ್ನ ಪಡೆದು ಸಾಧನೆ ಮಾಡಿದ್ದಾಳೆ.
ಜಿಲ್ಲೆಯ ಹೊಸದುರ್ಗ ಪಟ್ಟಣ ನಿವಾಸಿ ಸುಶ್ರಾವ್ಯ 80% ಅಂಕ ಪಡೆದು ಸಾಧನೆ ಮಾಡಿರುವ ಬಾಲಕಿ. ಹುಟ್ಟಿನಿಂದಲೂ ಈ ಕಾಯಿಲೆಯಿಂದ ಬಳಲುತ್ತಿರುವ ಸುಶ್ರಾವ್ಯಗೆ ಕಲಿಕಾ ದೌರ್ಬಲ್ಯವಿದೆ. ಮರೆವು ಹಾಗೂ ಅಲ್ಪ ಬುದ್ದಿಮಾಂದ್ಯತೆ ಸಹ ಇದೆ. ಆದರೂ ಎದೆಗುಂದದೇ ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿ ನೀಡುವ ವಿನಾಯತಿಯ ಅಡಿ ಪರೀಕ್ಷೆ ಬರೆದು 400 ಕ್ಕೆ 321 ಅಂಕ ಗಳಿಸಿ ತೇರ್ಗಡೆ ಹೊಂದಿದ್ದಾಳೆ. (ವಿನಾಯತಿ ಪರೀಕ್ಷೆಯಲ್ಲಿ 400 ಅಂಕಕ್ಕೆ ಮಾತ್ರ ಪರೀಕ್ಷೆ ಬರೆಯಲಾಗುತ್ತದೆ)
ಈ ಮೂಲಕ ಪರೀಕ್ಷಾ ಮಂಡಳಿ ಮತ್ತು ಶಿಕ್ಷಕರ ಪ್ರೋತ್ಸಾಹದಿಂದ ಸುಶ್ರಾವ್ಯ ಕನಸು ಚಿಗುರಿದೆ. ನನ್ನ ಸಾಧನೆಗೆ ಎಸ್.ಡಿ.ಎ ಶಾಲೆಯ ಎಲ್ಲ ಶಿಕ್ಷಕರ ಸಂಪೂರ್ಣ ಸಹಕಾರ ಹಾಗೂ ನನ್ನ ತಾಯಿ ರೇಖಾರವರ ಪ್ರಾಮಾಣಿಕ ತರಬೇತಿ ಕಾರಣ ಎಂದು ಬಾಲಕಿ ಹೇಳಿದ್ದಾಳೆ.
ಅನಾರೋಗ್ಯವನ್ನು ದಿಕ್ಕರಿಸಿ ಸಾಧನೆಗೈದ ಸುಶ್ರಾವ್ಯ ಸಾಧನೆಗೆ ಕೋಟೆನಾಡಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.