ಮುಂಬೈ: ಪ್ರಾಜೆಕ್ಟ್ ಅಸೈನ್ ಮೆಂಟ್ ಮನೆಯಲ್ಲೇ ಬಿಟ್ಟು ಬಂದಿದ್ದಕ್ಕೆ ಶಾಲಾ ಮುಖ್ಯ ಶಿಕ್ಷಕಿವೊಬ್ಬರು 13 ವರ್ಷದ ಬಾಲಕಿಗೆ 500 ಬಸ್ಕಿ ಹೊಡೆಯುವಂತೆ ಶಿಕ್ಷೆ ನೀಡಿದ ಘಟನೆ ಕೋಲ್ಹಾಪುರದ ಶಾಲೆಯಲ್ಲಿ ನಡೆದಿದೆ.
ಚಾಂದ್‍ಗಡ್ ತಾಲೂಕಿನ ಕನೂರ್ ಗ್ರಾಮದಲ್ಲಿರುವ ಭುವೇಶ್ವರಿ ಸಂದೇಶ್ ವಿದ್ಯಾಲಯಾದಲ್ಲಿ ಈ ಘಟನೆ ನಡೆದಿದೆ. ವಿಜಯಾ ಚೌಗಾಲೆ ಶಿಕ್ಷೆಗೆ ಒಳಗಾದ 8ನೇ ತರಗತಿ ವಿದ್ಯಾರ್ಥಿನಿ. ನವೆಂಬರ್ 24 ರಂದು ವಿಜಯಾ ತನ್ನ ಪ್ರಾಜೆಕ್ಟ್ ಸಲ್ಲಿಸಬೇಕಿತ್ತು. ಆದರೆ ಆ ದಿನ ಶಿಕ್ಷಕಿ ಗೈರು ಹಾಜರಾಗಿದ್ದು, ಮುಖ್ಯ ಶಿಕ್ಷಕಿ ಅಶ್ವಿನಿ ದೇವಾನ್ ಮಕ್ಕಳ ಅಸೈನ್‍ಮೆಂಟ್ ನೋಡುತ್ತಿದ್ದರು. ವಿಜಯಾ ಸೇರಿ 6 ವಿದ್ಯಾರ್ಥಿಗಳು ಪ್ರಾಜೆಕ್ಟ್ ನೀಡಿರಲಿಲ್ಲ. ಆಗ ಮುಖ್ಯ ಶಿಕ್ಷಕಿ ದೇವಾನ್ ವಿದ್ಯಾರ್ಥಿಗಳಿಗೆ ಬಸ್ಕಿ ಹೊಡೆಯಲು ಹೇಳಿದ್ದರು.
Advertisement
ಶಿಕ್ಷೆಯಿಂದ ಬಳಲುತ್ತಿರುವ ಬಾಲಕಿಗೆ ತನ್ನ ಬಲಗಾಲಿನಲ್ಲಿ ನೋವಿದ್ದು, ಬೇರೆಯವರ ಸಹಾಯ ಪಡೆದು ನಡೆದುಕೊಂಡು ಹೋಗುವ ಸ್ಥಿತಿ ಎದುರಾಗಿದೆ. ನಾನು ನನ್ನ ಪ್ರಾಜೆಕ್ಟ್ ಅಸೈನ್‍ಮೆಂಟ್ ಮನೆಯಲ್ಲೇ ಮರೆತು ಹೋಗಿದ್ದೆ. ಹೀಗಾಗಿ ಮುಖ್ಯ ಶಿಕ್ಷಕಿ ನನಗೆ 500 ಬಸ್ಕಿ ಹೊಡೆಯಲು ಹೇಳಿದ್ದರು. 300 ಬಸ್ಕಿ ಹೊಡೆಯಲು ಮಾತ್ರ ಸಾಧ್ಯವಾಯಿತು. ಆದಾದ ಬಳಿಕ ನಾನು ಕುಸಿದು ಬಿದ್ದೆ. ನಂತರ ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಎಂದು ವಿಜಯಾ ತಿಳಿಸಿದ್ದಾರೆ.
Advertisement
Advertisement
ಕೆಲವು ವಿದ್ಯಾರ್ಥಿಗಳು 50 ಬಸ್ಕಿ ಹೊಡೆದರೆ, ಇನ್ನೂ ಕೆಲವು ವಿದ್ಯಾರ್ಥಿಗಳು 100 ಬಸ್ಕಿ ಹೊಡೆದಿದ್ದಾರೆ. ಆದರೆ ವಿಜಯಾ ಮಾತ್ರ 300 ಬಸ್ಕಿ ಹೊಡೆದು ಅಲ್ಲಿಯೇ ಕುಸಿದು ಬಿದ್ದಿದ್ದಾಳೆ. ಆಕೆ ಕುಸಿದು ಬಿದ್ದ ತಕ್ಷಣ ಆ ಶಾಲೆಯಲ್ಲೇ ಪಿಯೋನ್ ಆಗಿ ಕೆಲಸ ಮಾಡುತ್ತಿದ್ದ ವಿಜಯಾ ತಂದೆ ರಮೇಶ್ ಗೆ ಆಕೆಯ ಆರೋಗ್ಯದ ಬಗ್ಗೆ ತಿಳಿಸಿದ್ದಾರೆ.
Advertisement
ವಿಜಯಾ ತರಗತಿಯಲ್ಲೇ ಕುಸಿದು ಬಿದ್ದಿದ್ದನ್ನು ಕೆಲವು ಹುಡುಗಿಯರು ನನಗೆ ಬಂದು ತಿಳಿಸಿದರು. ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆಕೆ 8 ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದಳು ಎಂದು ವಿಜಯಾ ತಂದೆ ರಮೇಶ್ ಹೇಳಿದ್ದಾರೆ.
ನನ್ನ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡುವಂತೆ ಹೇಳುತ್ತಿದ್ದಳು. ಆದರೆ ಶಾಲೆ ವಿರುದ್ಧ ದೂರು ನೀಡಲು ನನಗೆ ಕಷ್ಟವಾಯಿತು. ಏಕೆಂದರೆ ನಾನು ಅಲ್ಲಿ ಪಿಯೋನ್ ಆಗಿ ಕೆಲಸ ಮಾಡುತ್ತಿದ್ದೆ. ನಂತರ ನನ್ನ ಪತ್ನಿ ನಿಮಗೆ ಕೆಲಸ ಮುಖ್ಯವೋ? ಅಥವಾ ಮಗಳು ಮುಖ್ಯವೋ? ಎಂದು ನನಗೆ ಪ್ರಶ್ನಿಸಿದಳು. ನಂತರ ನನ್ನ ಪತ್ನಿಯೇ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದಳು. ಆಗ ಪೊಲೀಸರು ಮುಖ್ಯ ಶಿಕ್ಷಕಿ ವಿರುದ್ಧ ನಾನ್-ಕಾಗ್ನಿಸೆಬಲ್ ಕೇಸ್ ದಾಖಲಿಸಿಕೊಂಡರು. ಇದು ತಪ್ಪು. ಮುಖ್ಯ ಶಿಕ್ಷಕಿಗೆ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.
ಮುಖ್ಯ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದು, ಒಂದು ಗಂಟೆಯಲ್ಲೇ ಜಾಮೀನು ಪಡೆದು ಹೊರಬಂದಿದ್ದಾರೆ.