ಮಡಿಕೇರಿ: ಚಾಕೊಲೇಟ್ ಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ವ್ಯಕ್ತಿಯೋರ್ವ ತನ್ನ ಮನೆಯಲ್ಲೇ ಅತ್ಯಚಾರ ಎಸಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗ್ರಾಮಾಂತರ ಠಾಣಾ (Madikeri Rural Police Station) ವ್ಯಾಪ್ತಿಯಲ್ಲಿ ನಡೆದಿದೆ.
ಮಧು (45) ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಕಾಮುಕ. ನಿನ್ನೆ (ಸೋಮವಾರ) ಸಂಜೆ ತನ್ನ ಮಗಳಿಂದ ಬಾಲಕಿಗೆ ಪೋನ್ ಮಾಡಿ ಮನೆಗೆ ಕರೆಸಿಕೊಂಡಿದ್ದಾನೆ. ಬೇಸಿಗೆ ರಜೆ ಇರುವ ಕಾರಣ ಬಾಲಕಿ ಪೋಷಕರ ಬಳಿ ಸ್ನೇಹಿತೆ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದಾಳೆ. ಮನೆಗೆ ಹೋದ ಸಂದರ್ಭದಲ್ಲಿ ಮಧು ತನ್ನ ಮಗಳಿಗೆ ಹಾಗೂ ಅಕೆಯ ಸ್ನೇಹಿತೆಗೆ ಚಾಕೊಲೇಟ್ ಕೊಟ್ಟಿದ್ದಾನೆ. ನಂತರ ತನ್ನ ಮಗಳಿಗೆ ಮಗಳಿಗೆ ಅಂಗಡಿಗೆ ಹೋಗಿ ಮತ್ತಷ್ಟು ಚಾಕೊಲೇಟ್ ತರುವಂತೆ ಹೇಳಿ ಕಳಿಸಿದ್ದಾನೆ.
ಮಗಳು ಚಾಕೊಲೇಟ್ ತರಲು ಅಂಗಡಿಗೆ ಹೋದ ನಂತರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ನಂತರ ಬಾಲಕಿಯ ಪೋಷಕರು ತನ್ನ ಮಗಳು ಮನೆಗೆ ಕಳುಹಿಸುವಂತೆ ಹೇಳಿದ್ದಾರೆ. ಆಗ ಮಧು ನಿಮ್ಮ ಮಗಳು ಬೆಳಿಗ್ಗೆ ಬರುತ್ತಾಳೆ ನನ್ನ ಮಗಳೊಂದಿಗೆ ಆಟವಾಡುತ್ತಿದ್ದಾಳೆ ಎಂದು ಹೇಳಿ ಫೋನ್ ಕರೆಯನ್ನ ಕಟ್ ಮಾಡಿದ್ದಾನೆ. ಅನುಮಾನಗೊಂಡ ಬಾಲಕಿಯ ಪೋಷಕರು ಮಗಳ ಸ್ನೇಹಿತೆಯ ಮನೆಗೆ ಹೋಗಿ ವಿಚಾರ ಮಾಡುವಾಗ ತನ್ನ ಮೇಲೆ ನಡೆದಿರುವ ಘಟನೆ ಬಗ್ಗೆ ಪೋಷಕರ ಬಳಿ ಬಾಲಕಿ ಹೇಳಿಕೊಂಡಿದ್ದಾಳೆ.
ಕೂಲಿ ಕಾರ್ಮಿಕರಾಗಿದ್ದ ಬಾಲಕಿಯ ಪೋಷಕರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.