ಕೋಲಾರ: ವಿದ್ಯಾರ್ಥಿನಿ ಅತ್ಯಾಚಾರ ಯತ್ನ ಹಾಗೂ ಕೊಲೆ ಪ್ರಕರಣವನ್ನು ಮಾಲೂರು ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯುವಕ ರಂಜಿತ್ (22) ಬಂಧಿತ ಆರೋಪಿಯಾಗಿದ್ದು, ಜಿಲ್ಲೆಯ ಮಾಲೂರು ತಾಲೂಕಿನ ಗ್ರಾಮದವನು. ಈತ ಮೃತ ವಿದ್ಯಾರ್ಥಿನಿ ಮನೆಯ ಬಳಿ ಗಾರೆ ಕೆಲಸ ಮಾಡಲು ಬರುತ್ತಿದ್ದನು. ಆದ್ರೆ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ಸಂಬಂಧಿಸಿದಂತೆ ಆರೋಪಿಯನ್ನು ಇಂದು ನ್ಯಾಯಾಲಯದ ಮುಂದೆ ಮಾಲೂರು ಪೊಲೀಸರು ಹಾಜರುಪಡಿಸಲಿದ್ದಾರೆ.
ಏನಿದು ಪ್ರಕರಣ?:
ಬುಧವಾರ ಸಂಜೆ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ ರಕ್ಷಿತಾ (15) ಎಂಬ ವಿದ್ಯಾರ್ಥಿನಿಯನ್ನು ಅಪಹರಿಸಿ ಜಿಲ್ಲೆಯ ಮಾಲೂರು ಪಟ್ಟಣದ ಪಟ್ಟಣದ ರೈಲ್ವೇ ಅಂಡರ್ ಪಾಸ್ ಬಳಿಯ ನಿರ್ಜನ ಪ್ರದೇಶದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿತ್ತು. ಮಾಲೂರು ಪಟ್ಟಣದ ಇಂದಿರಾನಗರದ ನಿವಾಸಿಯಾಗಿದ್ದ ರಕ್ಷಿತಾ, ಬಿಜಿಎಸ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು. ಬುಧವಾರ ಸಂಜೆ 4.30ರ ವೇಳೆ ಶಾಲೆಯಿಂದ ಸ್ನೇಹಿತೆಯೊಂದಿಗೆ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ದುಷ್ಕರ್ಮಿಗಳಿಬ್ಬರು ಅಪಹರಣ ಮಾಡಿದ್ದರು. ಬಳಿಕ ಅದೇ ಮಾರ್ಗದಲ್ಲಿದ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿರುವ ಶಂಕೆ ವ್ಯಕ್ತವಾಗಿತ್ತು. ಅಲ್ಲದೇ ವಿದ್ಯಾರ್ಥಿನಿ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದರು.
ಘಟನೆ ವೇಳೆ ರಕ್ಷಿತಾ ಜೊತೆಗಿದ್ದ ಸ್ನೇಹಿತೆ, ದುಷ್ಕರ್ಮಿಗಳಿಂದ ತಪ್ಪಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಳು. ಬಳಿಕ ವಿದ್ಯಾರ್ಥಿನಿ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರು ಸ್ಥಳಕ್ಕೆ ತಲುಪುವ ವೇಳೆಗೆ ರಕ್ಷಿತಾಳನ್ನು ಕೊಲೆ ಮಾಡಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಘಟನೆ ನಡೆದ ಬಳಿಕ ರಕ್ಷಿತಾಳನ್ನು ಅಪಹರಣ ಮಾಡಲು ಆರೋಪಿಗಳು ಬಳಸಿದ್ದ ಬೈಕ್ ಸ್ಥಳದಲ್ಲಿ ಪತ್ತೆಯಾಗಿದ್ದು, ಪೊಲೀಸರು ವಶಕ್ಕೆ ಪಡೆದಿದ್ದರು. ಘಟನೆ ಕುರಿತು ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.