– ಆಕ್ರೋಶಗೊಂಡ ಜನರಿಂದ ಲಾರಿಗೆ ಬೆಂಕಿ
ದಾವಣಗೆರೆ: ಸ್ಪೆಷಲ್ ಕ್ಲಾಸಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಮರಳಿನ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮರಿಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದಿವ್ಯಾ ಪಾಟೀಲ್(15) ಸಾವನ್ನಪ್ಪಿದ ಬಾಲಕಿ. ಗ್ರಾಮದ ಸಮೀಪವಿರುವ ಶಾಲೆಯಲ್ಲಿ ದಿವ್ಯಾ 10ನೇ ತರಗತಿ ಓದುತ್ತಿದ್ದಳು. ಇಂದು ಬೆಳಗ್ಗೆ ಸ್ಪೆಷಲ್ ಕ್ಲಾಸ್ ಇದ್ದ ಹಿನ್ನೆಲೆಯಲ್ಲಿ ದಿವ್ಯಾ ಶಾಲೆಗೆ ಸೈಕಲಿನಲ್ಲಿ ತೆರಳುತ್ತಿದ್ದಳು. ಈ ವೇಳೆ ತುಂಗಭದ್ರ ನದಿಯಿಂದ ಮರಳು ತುಂಬಿಕೊಂಡು ಹೋಗುತ್ತಿದ್ದ ಲಾರಿ ದಿವ್ಯಾಗೆ ಡಿಕ್ಕಿ ಹೊಡೆದಿದೆ. ಪರಿಣಾಮ ದಿವ್ಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಬಾಲಕಿ ಮೃತಪಡುತ್ತಿದ್ದಂತೆ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದಾನೆ. ಆಕ್ರೋಶಗೊಂಡ ಗ್ರಾಮಸ್ಥರು ಲಾರಿಗೆ ಬೆಂಕಿ ಇಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
Advertisement
ಪ್ರತಿನಿತ್ಯ ತುಂಗಾಭದ್ರ ನದಿಯಿಂದ ಮರಳು ತುಂಬಿದ ಲಾರಿಗಳ ಸಂಚಾರ ಮಾಡುತ್ತಿವೆ. ಬೈಕ್‍ಗಳಲ್ಲಿ, ಕಾರುಗಳಲ್ಲಿ ಓಡಾಡುವುದು ಕೂಡ ಕಷ್ಟವಾಗಿದೆ. ಅಕ್ರಮವಾಗಿ ಕೆಲವರಿಗೆ ಪರವಾನಿಗೆ ಇಲ್ಲದೆ ಮರಳುಗಾರಿಕೆ ಮಾಡುತ್ತಿದ್ದರು. ಇದರಿಂದ ಗ್ರಾಮಸ್ಥರು ಸಾಕಷ್ಟು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದರು ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ ಮರಳು ಲಾರಿಗಳು ಗ್ರಾಮದಲ್ಲೇ ಹಾದು ಹೋಗುತ್ತಿರುವುದರಿಂದ ಇಲ್ಲಿನ ಗ್ರಾಮಸ್ಥರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿತ್ತು.
Advertisement
Advertisement
ಇದೀಗ ಶಾಲೆಗೆ ಹೋಗಿ ಓದಿ ಉನ್ನತ ಮಟ್ಟಕ್ಕೆ ಹೋಗಬೇಕಿದ್ದ ಬಾಲಕಿ ಈಗ ಶವವಾಗಿ ಮನೆಗೆ ಬಂದಿದ್ದಾಳೆ. ಅಲ್ಲದೆ ಕೂಡಲೇ ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಎಸ್‍ಪಿ ಯವರು ಬರಬೇಕು ಇಲ್ಲವಾದರೆ ಉಗ್ರವಾದ ಹೋರಾಟ ಮಾಡುವುದಾಗಿ ಗ್ರಾಮಸ್ಥರು ತಿಳಿಸಿದರು. ಇನ್ನು ಸ್ಥಳಕ್ಕೆ ನ್ಯಾಮತಿ ಠಾಣೆಯ ಪೊಲೀಸರು ಆಗಮಿಸಿದ್ದು, ಪರಿಸ್ಥಿತಿ ನಿಯಂತ್ರಿಸುವಲ್ಲಿ ಹರಸಾಹಸಪಟ್ಟರು. ಇತ್ತ ಬಾಲಕಿ ಮೃತ ಸ್ಥಳದಲ್ಲಿ ಪೋಷಕರ ಆಕ್ರಂಧನ ಮುಗಿಲು ಮುಟ್ಟಿತ್ತು.