– ಯುವಕನಿಗಾಗಿ ಮನೆ, ಪೋಷಕರನ್ನು ಬಿಟ್ಟು ಹೋದ ಯುವತಿ
– ಯುವತಿಯ ಪ್ರೀತಿಗೆ ನೆಟ್ಟಿಗರು ಫಿದಾ
ತಿರುವನಂತಪುರಂ: ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುತ್ತಾರೆ. ಇದೀಗ ಕೇರಳದ ಯುವತಿಯೊಬ್ಬಳು ತನ್ನ ಪೋಷಕರನ್ನು ಬಿಟ್ಟು ಪಾರ್ಶ್ವವಾಯುವಿಗೆ ಒಳಗಾಗಿರುವ ಯುವಕನನ್ನು ಮದುವೆಯಾಗಿರುವ ಅಪರೂಪದ ಘಟನೆ ನಡೆದಿದೆ.
ಶಾಹ್ನಾ ಪಾರ್ಶ್ವವಾಯುವಿಗೆ ಒಳಗಾದ ಪ್ರಣವ್‍ನನ್ನು ಮದುವೆಯಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾಳೆ. ಶಾಹ್ನಾ ತನ್ನ ಪೋಷಕರ ವಿರುದ್ಧವಾಗಿ ಪ್ರಣವ್‍ನನ್ನು ಮದುವೆಯಾಗಿದ್ದಾಳೆ. ಇವರಿಬ್ಬರೂ ಫೇಸ್‍ಬುಕ್ ಮೂಲಕ ಪರಿಚಯವಾಗಿದ್ದು, ಮಂಗಳವಾರ ವಿವಾಹವಾಗಿದ್ದಾರೆ. ಇದೀಗ ಇವರಿಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಪ್ರೀತಿ ಮೂಡಿದ್ದು ಹೇಗೆ:
ಇರಿಂಜಲಕುಡ ಮೂಲದ ಪ್ರಣವ್ ಆರು ವರ್ಷಗಳ ಹಿಂದೆ ಕಾಲೇಜಿನಲ್ಲಿದ್ದಾಗ ರಸ್ತೆ ಅಪಘಾತವಾಗಿತ್ತು. ಆಗ ಸೊಂಟದ ಕೆಳಗಿನ ಭಾಗದ ಶಕ್ತಿ ಕಳೆದುಕೊಂಡು ಪಾರ್ಶ್ವವಾಯುವಿಗೆ ಒಳಗಾಗಿದ್ದನು. ಅಂದಿನಿಂದ ಪ್ರಣವ್ ವೀಲ್‌ಚೇರ್ ಮೇಲಿಯೇ ಇದ್ದಾರೆ. ಅಲ್ಲದೇ ಮೂಲಭೂತ ಅಗತ್ಯಗಳಿಗೂ ಇನ್ನೊಬ್ಬರ ಮೇಲೆ ಅವಲಂಬಿತನಾಗಿದ್ದಾನೆ. ಪ್ರಣವ್ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯನಾಗಿದ್ದನು. ಆಗಾಗ ವೀಲ್‍ಚೇರ್ ಮೂಲಕವೇ ಸ್ಥಳೀಯ ದೇವಾಲಯದ ಉತ್ಸವಗಳಿಗೆ ಹೋಗುತ್ತಿದ್ದನು. ಅಲ್ಲಿನ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುತ್ತಿದ್ದನು.
ನೆಟ್ಟಿಗರು ಕೂಡ ಪ್ರಣವ್‍ಗೆ ಒಳ್ಳೆಯ ರೀತಿಯ ಕಮೆಂಟ್ ಮಾಡುತ್ತಿದ್ದರು. ಈ ವಿಡಿಯೋವನ್ನು ಶಾಹ್ನಾ ನೋಡಿದ್ದಾಳೆ. ನಂತರ ಪ್ರಣವ್‍ನನ್ನು ಭೇಟಿ ಮಾಡಲು ಪ್ರಯತ್ನಿಸಿದ್ದಾಳೆ. ಕೊನೆಗೆ ಮೂರು ತಿಂಗಳ ಹಿಂದೆ ಫೇಸ್‍ಬುಕ್‍ನಿಂದ ಪ್ರಣವ್‍ನ ಫೋನ್ ನಂಬರ್ ತೆಗೆದುಕೊಂಡಿದ್ದಾಳೆ. ಬಳಿಕ ಇಬ್ಬರು ಚಾಟಿಂಗ್ ಮಾಡುತ್ತಿದ್ದರು. ಪರಸ್ಪರ ಮಾತನಾಡಿದ್ದಾರೆ.
ಕೆಲವು ದಿನಗಳ ನಂತರ ತನ್ನ ಪ್ರೀತಿಯನ್ನು ಪ್ರಣವ್‍ಗೆ ಹೇಳಿಕೊಂಡಿದ್ದಾಳೆ. ಅಲ್ಲದೇ ಮದುವೆಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾಳೆ. ಆಗ ಪ್ರಣವ್ ತನ್ನ ಆರೋಗ್ಯದ ಸ್ಥಿತಿಯ ಬಗ್ಗೆ ಹೇಳಿದ್ದಾನೆ. ಆದರೂ ಶಾಹ್ನಾ ಆತನನ್ನೇ ಮದುವೆಯಾಗಲು ಬಯಸಿದ್ದಳು. ಪ್ರಣವ್, ಅವರ ಸಂಬಂಧಿಕರು ಮತ್ತು ಸ್ನೇಹಿತರು ಅವಳ ನಿರ್ಧಾರವನ್ನು ಬದಲಾಯಿಸುವಂತೆ ಮನವೊಲಿಸಿದರು. ಶಾಹ್ನಾ ಕುಟುಂಬವೂ ಈ ಸಂಬಂಧವನ್ನು ವಿರೋಧಿಸಿತ್ತು. ಆದರೆ ಶಾಹ್ನಾ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.
ಕೊನೆಗೆ ಪ್ರಣವ್‍ನನ್ನು ಖುದ್ದಾಗಿ ಭೇಟಿಯಾಗಲು ಶಾಹ್ನಾ ಮನೆಬಿಟ್ಟು ಹೋಗಿದ್ದಾಳೆ. ಇದರಿಂದ ಪ್ರಣವ್ ಕುಟುಂಬದವರು ಬೇಸರಗೊಂಡು ಮತ್ತೊಮ್ಮೆ ಆಕೆಯ ಮನವೊಲಿಸಲು ಪ್ರಯತ್ನಿಸಿದರು. ಕೊನೆಗೂ ಪ್ರಣವ್‍ನನ್ನು ಭೇಟಿಯಾದಳು. ಆದರೆ ಶಾಹ್ನಾ, ಪ್ರಣವ್‍ನನ್ನು ನೇರವಾಗಿ ನೋಡಿ ಆತನ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಆತನನ್ನೇ ಮದುವೆಯಾಗುವುದಾಗಿ ಹಠ ಮಾಡಿದ್ದಾಳೆ. ಭೇಟಿಯಾದ ಮರುದಿನವೇ ಶಾಹ್ನಾ ಮತ್ತು ಪ್ರಣವ್ ಕೊಡುಂಗಲ್ಲೂರಿನ ದೇವಸ್ಥಾನವೊಂದರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಪ್ರಣವ್ ಪೋಷಕರು, ಸ್ನೇಹಿತರು ಮತ್ತು ಸಂಬಂಧಿಕರ ನವದಂಪತಿಗೆ ಆಶೀರ್ವಾದ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಕೂಡ ನವ ದಂಪತಿಗೆ ಶುಭಾಕೋರಿದ್ದಾರೆ.