ಕೊಪ್ಪಳ: ಇತ್ತೀಚೆಗೆ ಕಿನ್ನಾಳ ಗ್ರಾಮದಲ್ಲಿ ಚೀಲದಲ್ಲಿ ಶವವಾಗಿ ಪತ್ತೆಯಾಗಿದ್ದ ಬಾಲಕಿ ಅನುಶ್ರಿ (7) ಕೊಲೆ ಆರೋಪಿಯನ್ನು ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು (Koppal Police) 2 ತಿಂಗಳ ಬಳಿಕ ಬಂಧಿಸಿದ್ದಾರೆ.
ಕಿನ್ನಾಳ ಗ್ರಾಮದ ಸಿದ್ದಲಿಂಗಯ್ಯ ನಾಯ್ಕಲ್ ಹಿರೇಮಠ (51) ಬಂಧಿತ ಆರೋಪಿ. ಮೃತ ಬಾಲಕಿ ಗುಟ್ಕಾ ತಂದು ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಪಕ್ಕದ ಮನೆಯ ಸಿದ್ದಲಿಂಗಯ್ಯ ಎಂಬಾತ ಹತ್ಯೆ ಮಾಡಿ, ಸಾಕ್ಷಿ ಸಿಗದಂತೆ ಶವವನ್ನ ಗೊಬ್ಬರದ ಚೀಲದಲ್ಲಿ ಕಟ್ಟಿ ಎಸೆದಿದ್ದ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಎಸ್ಪಿ ಯಶೋಧ ವಂಟಗೋಡಿ ತಿಳಿಸಿದ್ದಾರೆ. ಇದನ್ನೂ ಓದಿ: `ಸಲ್ಮಾನ್ ಖಾನ್ ಕೊಲೆ ಮಾಡ್ತೀನಿ’ – ವೀಡಿಯೋ ಹರಿಬಿಟ್ಟ ಆರೋಪಿ ಅರೆಸ್ಟ್!
ಗುಟ್ಕಾ ತಂದು ಕೊಡದಿದ್ದರಿಂದ ಆರೋಪಿ, ಬಾಲಕಿಯ ತಲೆಗೆ ಕೋಲಿನಿಂದ ಹೊಡೆದಿದ್ದಾನೆ. ತಲೆಗೆ ಜೋರಾಗಿ ಪೆಟ್ಟು ಬಿದ್ದ ಹಿನ್ನೆಲೆ ಬಾಲಕಿ ಸ್ಥಳದಲ್ಲೆ ಪ್ರಜ್ಞಾಹೀನಳಾಗಿ ಬಿದ್ದಿದ್ದಾಳೆ. ಬಾಲಕಿ ಮೃತಪಟ್ಟಿದ್ದಾಳೆ ಎಂಬ ಭಯದಲ್ಲಿ ಆಕೆಯನ್ನು ಚೀಲದಲ್ಲಿ ತುಂಬಿ ಮನೆಯ ಹಿಂದೆ ಇಟ್ಟಿದ್ದ. ಇದರಿಂದ ಬಾಲಕಿ ಉಸಿರುಗಟ್ಟಿ ಮೃತಪಟ್ಟಿದ್ದಳು. ಶವದ ವಾಸನೆ ಬಂದಾಗ ಆರೋಪಿ, ಚೀಲ ಇಟ್ಟಿದ್ದ ಸ್ಥಳ ಬದಲಾವಣೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಸಣ್ಣ ಸುಳಿವೂ ಇಲ್ಲದ ಈ ಪ್ರಕರಣದಲ್ಲಿ 2 ತಿಂಗಳ ಬಳಿಕ ಕೊಪ್ಪಳ ಪೊಲೀಸರು ಆರೋಪಿಯನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ.
ಕಳೆದ ಏ.18ರ ಮಧ್ಯಾಹ್ನದ ವೇಳೆ ಬಾಲಕಿ ನಾಪತ್ತೆಯಾಗಿದ್ದಳು. ಈ ಸಂಬಂಧ ಏ.20 ರಂದು ಕೊಪ್ಪಳ ಮಹಿಳಾ ಠಾಣೆಯಲ್ಲಿ ಬಾಲಕಿ ತಂದೆ ರಾಘವೇಂದ್ರ ಮಡಿವಾಳ ದೂರು ದಾಖಲಿಸಿದ್ದರು. ಏ.21 ರಂದು ಬಾಲಕಿಯ ಮನೆಯ ಸಮೀಪದ ಹಳೇಯ ಮನೆಯಲ್ಲಿ ಶವ ಚೀಲದಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: ಸುಪಾರಿ ಕೊಟ್ಟು ತಮ್ಮನನ್ನೇ ಕೊಲ್ಲಿಸಿದ ಅಣ್ಣ – ಹತ್ಯೆಗೈದಿದ್ದ 8 ಆರೋಪಿಗಳು ಅಂದರ್