ಬೆಳಗಾವಿ: ಮುಂದಿನ ತಿಂಗಳು ಹಸಮಣೆ ಏರಬೇಕಾದ ಯುವತಿ ಪೊಲೀಸರ ಎದುರೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಗಣೇಶಪುರದ ಸಮೃದ್ಧಿ ಕಾಲೋನಿಯ ನಿವಾಸಿ ಶೃತಿ ಗೋಕಾಕ್ ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಶೃತಿ ಅವರ ಆತ್ಮಹತ್ಯೆಗೆ ಕಾರಣ ಭಾವಿ ಪತಿ ವಿನಾಯಕ್ ಕುಂದಗೋಳ್ ಎನ್ನುವ ಆರೋಪ ಕೇಳಿಬಂದಿದೆ.
ಶೃತಿ ಅವರಿಗೆ ವಿನಾಯಕ್ ಎಂಬ ಯುವಕನ ಜೊತೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಹಿರಿಯ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಲಾಗಿತ್ತು. ಅದರಂತೆ 2017ರ ಮೇ 5ರಂದು ಮದುವೆ ನಡೆಸಲು ದಿನಾಂಕ ಸಹ ನಿಗದಿಯಾಗಿತ್ತು.
ವಿನಾಯಕ್ ನಿರಂತರವಾಗಿ ಶೃತಿ ಅವರಿಗೆ ತಮ್ಮ ಪೋಷಕರಿಂದ 5 ಲಕ್ಷ ರೂ. ಹಣ ಕೊಡಿಸುವಂತೆ ಒತ್ತಾಯಿಸುತ್ತಿದ್ದನು. ಈ ವಿಚಾರವಾಗಿ ಶೃತಿ ಮತ್ತು ವಿನಾಯಕ್ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಇತ್ತೀಚಿಗೆ ಜಗಳ ನಡೆದಾಗ ಶೃತಿ ಎರಡು ದಿನ ವಿನಾಯಕ್ ಪೋನ್ ರೀಸಿವ್ ಮಾಡಿರಲಿಲ್ಲ. ಶೃತಿ ಮತ್ತೆ ಪೋನ್ ಮಾಡಿದಾಗ ವಿನಾಯಕನ ಗರ್ಲ್ ಫ್ರೆಂಡ್ ಕಾಲ್ ರಿಸೀವ್ ಮಾಡಿ ನಾನು ಮತ್ತು ವಿನಾಯಕ್ ಎರಡು ವರ್ಷದಿಂದ ಲವ್ ಮಾಡುತ್ತಿರುವುದಾಗಿ ಹೇಳಿದ್ದಾಳೆ. ಇದರಿಂದ ಶೃತಿಗೆ ಮತ್ತಷ್ಟು ಆಘಾತವಾಗಿದೆ. ಈ ಬಗ್ಗೆ ವಿನಾಯಕ್ ಗೆ ಕೇಳಿದಾಗ ಎರಡು ವರ್ಷ ಮದುವೆ ಮುಂದೆ ಹಾಕು ಎಂದು ಹೇಳಿದ್ದಾನೆ.
ವಿನಾಯಕನ ಮಾತುಗಳಿಂದ ಮನನೊಂದ ಶೃತಿ ಡಿಸಿಪಿ ಜಿ. ರಾಧಿಕಾರನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ಆದರೆ ಡಿಸಿಪಿ ಜಿ.ರಾಧಿಕಾ. ಸ್ಥಳೀಯ ಪೊಲೀಸ್ ಠಾಣೆಗೆ ಹೋಗುವಂತೆ ಸೂಚನೆ ನೀಡಿದ್ದರು. ಇಂದು ಬೆಳಗ್ಗೆ 10 ಗಂಟೆಗೆ ಪೊಲೀಸ್ ಠಾಣೆಗೆ ಬಂದ ಶೃತಿ ಏಕಾಏಕಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣ ಪೊಲೀಸರು ಶ್ರತಿಯನ್ನು ಬೆಳಗಾವಿಯ ಜಿಲ್ಲಾಸ್ಪತ್ರೆ ದಾಖಲಿಸಿದ್ದಾರೆ. ಈ ಸಂಬಂಧ ನಗರ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.