ಮೈಸೂರು: ಅರಮನೆ ನಗರಿಯಲ್ಲೊಂದು ಹೀನಕೃತ್ಯ ನಡೆದಿದ್ದು, ಆರು ಮಂದಿ ಕಾಮುಕರು ಸೇರಿಕೊಂಡು ಯುವತಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ.
ಮೈಸೂರಿನ ಹೊರವಲಯದ ಲಿಂಗಾಂಬುಧಿ ಪಾಳ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪ್ರಿಯಕರನ ಮುಂದೆಯೇ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಏನಿದು ಪ್ರಕರಣ?
ಮೈಸೂರಿನ ಲಾಡ್ಜ್‌ವೊಂದರಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದು, ಪರಿಚಯವಾಗಿ ಪರಸ್ಪರ ಪ್ರೀತಿಸುತ್ತಿದ್ದರು. ಬುಧವಾರ ತಡರಾತ್ರಿ ಬೈಕ್‍ನಲ್ಲಿ ಇಬ್ಬರು ಲಿಂಗಾಂಬುಧಿ ಪಾಳ್ಯದ ನಿರ್ಜನ ಪ್ರದೇಶಕ್ಕೆ ಹೋಗಿದ್ದರು. ಅಲ್ಲಿಯೇ ಕುಳಿತು ಪ್ರೇಮಿಗಳು ಮಾತನಾಡುತ್ತಿದ್ದರು. ಆದರೆ ಇದೇ ಪ್ರದೇಶದಲ್ಲಿ ಕಾರಿನಲ್ಲಿ ಕುಳಿತುಕೊಂಡು ಆರು ಮಂದಿ ಮದ್ಯ ಸೇವನೆ ಮಾಡುತ್ತಿದ್ದರು. ಅವರು ಪ್ರೇಮಿಗಳನ್ನು ನೋಡಿ ಏಕಾಏಕಿ 6 ಮಂದಿ ದುಷ್ಕರ್ಮಿಗಳು ಇವರ ಮೇಲೆ ಹಲ್ಲೆ ಮಾಡಿದ್ದಾರೆ.
ಯುವತಿ ಮುಂದೆ ಪ್ರಿಯಕರನ ಮೇಲೆ ಹಲ್ಲೆ ನಡೆಸಿ ಬಳಿಕ ಆತನ ಮುಂದೆಯೇ ಆರು ಮಂದಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸದ್ಯಕ್ಕೆ ಯುವತಿ ಹಾಗೂ ಯುವಕ ಮೈಸೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಮೈಸೂರಿನ ಕುವೆಂಪು ನಗರ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುತ್ತಿದ್ದಾರೆ. ಆದರೆ ಈ ಘಟನೆ ಕುರಿತು ಇನ್ನೂ ಯಾವುದೇ ದೂರು ದಾಖಲಾಗಿಲ್ಲ.