ಹಾಸನ: ಗಾಂಧಿ ಜಯಂತಿ ದಿನ ಭಾಷಣ ಮಾಡಬೇಕು ಎಂದು ಕಲಿತುಕೊಂಡಿದ್ದ ಬಾಲಕಿ ಅಪಘಾತದಲ್ಲಿ ಮೃತಪಟ್ಟ ಘಟನೆ ಹಾಸನದ ಅರಕಲಗೂಡು ಪಟ್ಟಣದ ಪೇಟೆ ಮುಖ್ಯರಸ್ತೆಯಲ್ಲಿ ನಡೆದಿದೆ.
ಮನಿಷಾ(9) ಮೃತಪಟ್ಟ ಬಾಲಕಿ. ಮನಿಷಾ 3ನೇ ತರಗತಿಯ ವಿದ್ಯಾರ್ಥಿನಿ. ಇಂದು ಗಾಂಧಿ ಜಯಂತಿಯಾಗಿದ್ದರಿಂದ ಶಾಲೆಯಲ್ಲಿ ಮನಿಷಾ ಭಾಷಣ ಮಾಡುವವಳಿದ್ದಳು. ಅದಕ್ಕಾಗಿ ಪೂರ್ವ ತಯಾರಿ ಕೂಡ ಮಾಡಿಕೊಂಡಿದ್ದಳು. ಆದರೆ ಭಾಷಣಕ್ಕೂ ಮೊದಲೇ ಆಕೆ ಅಪಘಾತಕ್ಕೆ ಬಲಿಯಾದಳು.
ಆಗಿದ್ದೇನು..?
ತನ್ನ ಅಜ್ಜಿ ನೀಡಿದ ಚುರುಮುರಿಯನ್ನು ತಿಂದು ಮನಿಷಾ ಎದುರುಗಡೆ ಮನೆಗೆ ಪಾತ್ರೆ ಕೊಟ್ಟು ಬರುತ್ತೇನೆ ಎಂದು ಮನೆಯ ಹೊರಗೆ ಹೋಗಿದ್ದಳು. ಈ ವೇಳೆ ಮನೆಯ ಎದುರೇ ವೇಗವಾಗಿ ಬಂದ ಬೈಕ್ ಸವಾರ ಮನಿಷಾಳಿಗೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾನೆ.
ಬೈಕ್ ಡಿಕ್ಕಿ ಹೊಡೆದ ಪರಿಣಾಮ ಆಟವಾಡಿಕೊಂಡು ಮನೆಯ ಬಳಿಯೇ ಇದ್ದ ಮನಿಷಾ ಮೃತಪಟ್ಟಿದ್ದಾಳೆ. ಬಳಿಕ ಬಾಲಕಿ ಮೃತದೇಹ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಈ ವೇಳೆ ಪೋಷಕರ ಆಕ್ರಂದನ ಮನಕಲಕುವಂತಿತ್ತು. ಈ ಬಗ್ಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಜಾಗರೂಕ ಬೈಕ್ ಸವಾರನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ತಮ್ಮ ತೆವಲಿಗೋ ಅಥವಾ ಇನ್ಯಾವುದೋ ಕಾರಣಕ್ಕೆ ಬೇಕಾಬಿಟ್ಟಿ ಬೈಕ್ ಚಲಾಯಿಸುವ ಸವಾರರು ಈ ರೀತಿ ಮುಗ್ಧ ಮಕ್ಕಳಿಗೆ ಡಿಕ್ಕಿ ಹೊಡೆಯುವುದು ನಗರಗಳಲ್ಲಿ ಪದೇ ಪದೇ ನಡೆಯುತ್ತಿವೆ. ಜನನಿಬಿಡ ಮತ್ತು ಬಡಾವಣೆಗಳ ರಸ್ತೆಗಳಲ್ಲಿಯೇ ಬೇಜವಾಬ್ದಾರಿ ಬೈಕ್ ರೇಡ್‍ಗೆ ಪುಟ್ಟ ಮಗುವಿನ ಪ್ರಾಣ ಪಕ್ಷಿ ಹಾರಿದೆ.