ಹರಾರೆ: ಜಿಂಬಾಬ್ವೆಯ ಬಾಲಕಿಯೊಬ್ಬಳು ತನ್ನ ಜೀವವನ್ನು ಪಣಕ್ಕಿಟ್ಟು ಬೃಹತ್ ಮೊಸಳೆಯೊಂದಿಗೆ ಹೋರಾಡಿ ಸ್ನೇಹಿತೆಯನ್ನು ರಕ್ಷಿಸಿ ಸ್ನೇಹ ಮೆರೆದಿದ್ದಾಳೆ.
ಜಿಂಬಾಬ್ವೆಯ ಸಿಂಡರೆಲ್ಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ ರೆಬೆಕಾ ಮುಕಾಂಬ್ವೆ(11) ಆಕೆಯ ಗೆಳತಿ ಲೇಟೋನಾ ಮುವಾನಿ(9) ಜೀವವನ್ನು ಮೊಸಳೆಯಿಂದ ರಕ್ಷಿಸಿದ್ದಾಳೆ. ತನ್ನ ಜೀವದ ಹಂಗು ತೊರೆದು ಮೊಸಳೆಯ ಬೆನ್ನೇರಿ, ಕಣ್ಣಿಗೆ ಚುಚ್ಚಿ ಸ್ನೇಹಿತೆಯ ಜೀವ ಉಳಿಸಿದ್ದಾಳೆ.
Advertisement
Advertisement
ಸಿಂಡರೆಲ್ಲಾ ಗ್ರಾಮದ ಹೊಳೆಯಲ್ಲಿ ಲೇಟೋನಾ ತನ್ನ ಸ್ನೇಹಿತರೊಂದಿಗೆ ಈಜಾಡುತ್ತಾ ಆಟವಾಡುತ್ತಿದ್ದಳು. ಈ ವೇಳೆ, ಬೃಹತ್ ಗಾತ್ರದ ಮೊಸಳೆಯೊಂದು ಲೇಟೋನಾ ಮೇಲೆ ದಾಳಿ ಮಾಡಿದಾಗ ಆಕೆ ಜೋರಾಗಿ ಕಿರುಚಾಡಿದ್ದಾಳೆ. ಈ ಕೂಗನ್ನು ಕೇಳಿದ ರೆಬೆಕಾ ಏನಾಯ್ತು ಎಂದು ಓಡಿ ಬಂದು ನೋಡಿದಾಗ, ಮೊಸಳೆ ಲೋಟೋನಾ ಮೇಲೆ ದಾಳಿ ನಡೆಸುತಿತ್ತು. ಆಕೆಯನ್ನು ಬಾಯಲ್ಲಿ ಕಚ್ಚಿ ಹಿಡಿದಿತ್ತು.
Advertisement
ಇದನ್ನು ಕಂಡು ಸ್ನೇಹಿತೆಯನ್ನು ರಕ್ಷಿಸಲು ಪಣತೊಟ್ಟ ರೆಬೆಕಾ ಹಿಂದೆ ಮುಂದೆ ನೋಡದೇ ನೀರಿಗೆ ಹಾರಿ ಮೊಸಳೆಯ ಬೆನ್ನ ಮೇಲೆ ಕುಳಿತಳು. ತನ್ನ ಚುರುಕು ಬುದ್ಧಿ ಉಪಯೋಗಿಸಿ, ನೇರವಾಗಿ ಮೊಸಳೆಯ ಕಣ್ಣಿಗೇ ಕೈ ಹಾಕಿದ್ದಳು. ಬಾಲಕಿ ಕೈಯಿಂದ ಕಣ್ಣಿಗೆ ಚುಚ್ಚುತ್ತಿದ್ದಂತೆಯೇ ಮೊಸಳೆ ನೋವಿನಿಂದ ಒದ್ದಾಡಿತ್ತು. ನೋವಿಗೆ ಬಾಲಕಿಯನ್ನು ಬಿಟ್ಟಿತು. ನಂತರ ರೆಬೆಕಾ ಗಾಯಗೊಂಡಿದ್ದ ತನ್ನ ಸ್ನೇಹಿತೆಯನ್ನು ರಕ್ಷಿಸಿ, ಈಜಿಕೊಂಡು ದಡಕ್ಕೆ ಕರೆತಂದಳು.
Advertisement
ಈ ಬಗ್ಗೆ ರೆಬೆಕಾ ಮಾತನಾಡಿ, ನನ್ನ ಸ್ನೇಹಿತೆ ನೋವಿನಿಂದ ಕಿರುಚಾಡುವುದನ್ನು ನೋಡಲು ಸಾಧ್ಯವಾಗಲಿಲ್ಲ. ಅದಕ್ಕೆ ನಾನು ಆಕೆ ರಕ್ಷಣೆಗೆ ಹೋದೆ. ಮೊದಲು ಮೊಸಳೆಯ ಬೆನ್ನಿಗೆ ಹಾರಿ ಬರಿಗೈಯಲ್ಲಿ ಅದಕ್ಕೆ ಹೊಡೆದೆ. ಆದರೆ, ಮೊಸಳೆ ಸ್ವಲ್ಪವೂ ಅತ್ತ ಇತ್ತ ಕದಲಲಿಲ್ಲ. ಆ ಮೇಲೆ ಬೇರೆ ಉಪಾಯ ತೋಚದೆ ನಾನು ಮೊಸಳೆಯ ಕಣ್ಣಿಗೆ ಕೈ ಹಾಕಿ ಹಲ್ಲೆ ಮಾಡಿದೆ. ಆಗ ಬಾಯಲ್ಲಿ ಕಚ್ಚಿ ಹಿಡಿದಿದ್ದ ನನ್ನ ಸ್ನೇಹಿತೆಯನ್ನು ಮೊಸಳೆ ಬಿಟ್ಟಿತ್ತು ಎಂದು ತಿಳಿಸಿದ್ದಾಳೆ.
ಸದ್ಯ ಈ ಸೆಣಸಾಟದಲ್ಲಿ ಅದೃಷ್ಟವಶಾತ್ ರೆಬೆಕಾಗೆ ಯಾವುದೇ ಗಾಯಗಳಾಗಿಲ್ಲ. ಆದರೆ ಲೇಟೋನಾ ಕೊಂಚ ಗಾಯಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಹೀಗೆ ತನ್ನ ಜೀವವನ್ನು ಪಣಕ್ಕಿಟ್ಟು ಸ್ನೇಹಿತೆಯ ಜೀವ ಉಳಿಸಿದ ಬಾಲಕಿ ಸ್ನೇಹಕ್ಕೆ ಎಲ್ಲರು ಭೇಷ್ ಎಂದಿದ್ದಾರೆ.