ತುಮಕೂರು: ಕುರುಬ ಸಮುದಾಯದ ಯುವತಿ ಬ್ರಾಹ್ಮಣ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಆಕೆಯ ತಾಯಿಯ ತಿಥಿಗೆ ಬರದಂತೆ ಗ್ರಾಮದ ಮುಖಂಡರು ಬಹಿಷ್ಕಾರ ಹಾಕಿರುವ ಅಮಾನವೀಯ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೀಗೇಬಾಗಿಯಲ್ಲಿ ನಡೆದಿದೆ.
Advertisement
ಗ್ರಾಮದ ವರದಯ್ಯ ಎಂಬವರ ಮಗಳು ಸರ್ಕಾರಿ ಉದ್ಯೋಗದಲ್ಲಿದ್ದು, ಬ್ರಾಹ್ಮಣ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅಂತರ್ಜಾತಿ ವಿವಾಹವಾಗಿದ್ದರಿಂದ ತಮ್ಮ ಕುರುಬ ಕುಲಕ್ಕೆ ಕೇಡಾಗಿದೆ ಎಂದು ಹೇಳಿ ಕುರುಬ ಸಂಘದವರು ಉಮಾ ದಂಪತಿಗೆ ಊರಿಗೆ ಬರದಂತೆ ನಿರ್ಬಂಧ ಹಾಕಿದ್ದಾರೆ. ಒಂದೊಮ್ಮೆ ತವರು ಮನೆಗೆ ಬಂದರೆ, ತವರು ಮನೆಯವರನ್ನ ಸಮಾಜದಿಂದ ದೂರ ಉಳಿಸಲು ಪಂಚಾಯ್ತಿ ಮಾಡಲಾಗಿದೆ. ಜುಲೈ 16 ರಂದು ವರದಯ್ಯರ ಮನೆಯಲ್ಲಿ ತಿಥಿ ಕಾರ್ಯ ಇದ್ದು ಅದಕ್ಕೆ ಅಂತರ್ಜಾತಿ ವಿವಾಹವಾದ ಉಮಾ ದಂಪತಿಗೆ ನಿರ್ಬಂಧ ಹೇರಲಾಗಿದೆ.
Advertisement
Advertisement
ಬುಧವಾರ ವರದಯ್ಯನ ಮಗ ಹರೀಶನನ್ನು ಸಂಘದ ಪದಾಧಿಕಾರಿಗಳು ಸಭೆ ಕರೆದು ಬಹಿಷ್ಕಾರದ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. ಸಂಘದ ಅಧ್ಯಕ್ಷರಾದ ಶಂಕರಪ್ಪ, ಉಪಾಧ್ಯಕ್ಷ ಲೋಕೇಶ್, ಕಾರ್ಯದರ್ಶಿ ನಾರಾಣಪ್ಪ ಸೇರಿದಂತೆ 10 ಜನರು ಸೇರಿ ಈ ರೀತಿಯ ಅಂಧ ದರ್ಬಾರ್ ನಡೆಸುತ್ತಿದ್ದಾರೆ. ತಿಮ್ಮಯ್ಯ ಕುಟುಂಬದವರ ಪಂಪ್ ಸೆಟ್ ವಿದ್ಯುತ್ ವಯರನ್ನು ಶಂಕರಪ್ಪ ಎನ್ನುವವರು ಕಿತ್ತುಹಾಕಿದ್ರು. ಈ ಕಾರಣಕ್ಕೆ ಜಗಳ ನಡೆದಿತ್ತು. ಇದರಲ್ಲಿ ಶಂಕರಪ್ಪನ ತಪ್ಪು ಇದ್ದರೂ ತಿಮ್ಮಯ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗಿದೆ.
Advertisement
ವರದಯ್ಯ ಕುಟುಂಬ ತಮಗಾಗುತ್ತಿರುವ ಅನ್ಯಾಯದ ಕುರಿತು ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಆದ್ರೂ ಕೂಡಾ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸುಮಾರು 8 ಕುಟುಂಬಗಳಿಗೆ ಕುರುಬರ ಸಂಘದಿಂದ ಈ ರೀತಿಯ ಬಹಿಷ್ಕಾರ ಹಾಕಲಾಗಿದೆ. ಅದರಲ್ಲಿ ನಾಲ್ಕು ಜನ ಹೆಣ್ಣುಮಕ್ಕಳು ಅಂತರ್ಜಾತಿಯ ವಿವಾಹವಾಗಿದ್ದಾರೆ. ಬಹಿಷ್ಕಾರಕ್ಕೆ ಬೇಸತ್ತು ತವರು ಮನೆಯ ಸಂಪರ್ಕವನ್ನೇ ಕಳೆದುಕೊಂಡಿದ್ದಾರೆ.