ಹೈದರಾಬಾದ್: ಪ್ರಿಯಕರ ಮದುವೆಯಾಗಲೂ ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಆತನ ರೂಮಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದದ್ರಿ ಜಿಲ್ಲೆಯ ವಲ್ಲಿಗೊಂಡ ಮಂಡಲದ ಪುಲಿಗಲ್ಲದಲ್ಲಿ ನಡೆದಿದೆ.
ಪೈಲ್ಲಾ ದಿವ್ಯ ರೆಡ್ಡಿ(20) ಆತ್ಮಹತ್ಯೆಗೆ ಶರಣಾದ ಯುವತಿ. ಈಕೆ ಮೆಡಿಪಲ್ಲಿನಲ್ಲಿರುವ ತನ್ನ ಗೆಳೆಯ ಬೊಗ್ಗಾ ನವೀನ್ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಪಿ ನವೀನ್ ವಿರುದ್ಧ ಆತ್ಮಹತ್ಯೆ ಪ್ರಕರಣ ಹಾಗೂ ವಂಚನೆ ಪ್ರಕರಣವನ್ನು ಬುಕ್ ಮಾಡಲಾಗಿದ್ದು, ವಿಚಾರಣೆಗೆಂದು ಆತನನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದಿವ್ಯಾ ಪದವಿ ವ್ಯಾಸಂಗ ಮಾಡುತ್ತಿದ್ದು, ರಾಮಂತಪುರದಲ್ಲಿ ಹಾಸ್ಟೆಲ್ ನಲ್ಲಿ ಇದ್ದಳು. ನವೀನ್ ಮತ್ತು ದಿವ್ಯಾ ಒಂದು ವರ್ಷದಿಂದ ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ಭರವಸೆ ಕೊಟ್ಟು ಆಕೆಯ ಜೊತೆ ಸಂಬಂಧ ಬೆಳೆಸಿದ್ದನು. ಆದರೆ ಇತ್ತೀಚೆಗೆ ನವೀವ್, ದಿವ್ಯಾಳಿಂದ ದೂರವಿರಲು ಪ್ರಯತ್ನಿಸಿದ್ದಾನೆ. ಹೀಗಾಗಿ ದಿವ್ಯಾ ಬುಧವಾರ ತಮ್ಮ ಮದುವೆಯ ಬಗ್ಗೆ ಮಾತನಾಡಲು ನವೀನ್ ರೂಮಿಗೆ ಹೋಗಿದ್ದಾಳೆ. ಅಲ್ಲಿ ನವೀನ್ ಮದುವೆಯಾಗಲು ನಿರಾಕರಿಸಿ ರೂಮಿನಿಂದ ಹೊರಗಡೆ ಹೋಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಸ್ವಲ್ಪ ಸಮಯದ ನಂತರ ನವೀನ್ ರೂಮಿಗೆ ಹಿಂದಿರುಗಿ ಬಂದಿದ್ದಾನೆ. ಆದರೆ ಒಳಗಡೆಯಿಂದ ರೂಮಿನ ಬಾಗಿಲನ್ನು ಲಾಕ್ ಮಾಡಲಾಗಿತ್ತು. ನಂತರ ಬಾಗಿಲನ್ನು ತೆರೆದು ನೋಡಿದಾಗ ದಿವ್ಯಾ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ನವೀನ್ ಪೊಲೀಸರಿಗೆ ಫೋನ್ ಮಾಡಿ ತಿಳಿಸಿದ್ದಾನೆ ಎಂದು ಇನ್ಸ್ ಪೆಕ್ಟರ್ ಅಂಜೀ ರೆಡ್ಡಿ ಹೇಳಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ದಿವ್ಯಾಳ ಪೋಷಕರಿಗೆ ಮಾಹಿತಿ ತಿಳಿಸಿದ್ದಾರೆ. ದಿವ್ಯಾ ತಂದೆ ಮಧುಸೂಧನ್ ರೆಡ್ಡಿ, ನನ್ನ ಮಗಳಿಗೆ ನವೀನ್ ಮೋಸ ಮಾಡಿದ್ದಾನೆ ಮತ್ತು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೆಪಿಸಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.
ಸದ್ಯಕ್ಕೆ ತಂದೆ ನೀಡಿದ ದೂರಿನ ಆಧಾರದ ಮೇರೆಗೆ ಪೊಲೀಸರು ಐಪಿಸಿ ಸೆಕ್ಷನ್ 420 (ವಂಚನೆ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv