ಬೆಂಗಳೂರು: 12 ವರ್ಷದ ಬಾಲಕಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಯಲಹಂಕ ನ್ಯೂ ಟೌನ್ ಅಟ್ಟೂರು ಲೇಔಟ್ ನಲ್ಲಿ ನಡೆದಿದೆ.
ಚಂದನಾ ಸಾವನ್ನಪ್ಪಿದ ಬಾಲಕಿ. ಅಟ್ಟೂರು ನಿವಾಸಿಗಳಾದ ಕುಮಾರ್ ಹಾಗೂ ಜ್ಯೋತಿ ದಂಪತಿಯ ಮಗಳಾದ ಚಂದನಾ ವಿದ್ಯಾನಿಕೇತನ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಳು. ಈಗ ಡ್ಯಾನ್ಸ್ ಮಾಸ್ಟರ್ ಸತೀಶ್ ಕಿರುಕುಳದಿಂದ ಚಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯರು ಹಾಗೂ ಪೋಷಕರು ಆರೋಪಿಸುತ್ತಿದ್ದಾರೆ. ಇತ್ತ ಚಂದನಾ ಸಂಬಂಧಿಕರು ಡ್ಯಾನ್ಸ್ ಮಾಸ್ಟರ್ ಸತೀಶ್‍ರಿಗೆ ಥಳಿಸಿದ್ದಾರೆ.
Advertisement
Advertisement
ಡ್ಯಾನ್ಸ್ ಕ್ಲಾಸ್‍ನಲ್ಲಿ ಆಗಿದ್ದೇನು?: ಡಾನ್ಸ್ ಕ್ಲಾಸ್ ನಲ್ಲಿ ಇನ್ನೊಬ್ಬ ಬಾಲಕಿ ಸ್ವಾತಿ(ಹೆಸರು ಬದಲಾಯಿಸಿದೆ) ಚೆನ್ನಾಗಿ ಡ್ಯಾನ್ಸ್ ಮಾಡುತ್ತಿದ್ದು, ಎಲ್ಲ ಡ್ಯಾನ್ಸ್ ಗಳಿಗೂ ಸ್ವಾತಿಯನ್ನು ಕರೆದುಕೊಳ್ಳುತ್ತಿದ್ದರು. ಸ್ವಾತಿಯಿಂದಾಗಿ ಕ್ಲಾಸ್ ನಲ್ಲಿ ಚಂದನಾಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿತ್ತು. ಸೋಮವಾರ ಸಂಜೆ ಕ್ಲಾಸ್ ನಲ್ಲಿ ಸ್ವಾತಿ, ಚಂದನಾಳಿಗೆ ಹೇನಿನ ಔಷಧಿಯನ್ನು ನೀಡಿದ್ದಾಳೆ. ಅದೇ ಔಷಧಿಯನ್ನು ಚಂದನಾಳಿಗೆ ಬಲವಂತವಾಗಿ ಕುಡಿಸಲಾಗಿದೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.
Advertisement
ಒಂದು ದಿನ ನಮ್ಮ ಮಗಳು ಕ್ಲಾಸ್ ಗೆ ಬಂದಿಲ್ಲ ಅಂದರೆ ಸತೀಶ್ ಮನೆಗೆ ಸಾಕಷ್ಟು ಬಾರಿ ಫೋನ್ ಮಾಡುತ್ತಿದ್ದರು. ನಮ್ಮ ಮಗಳು ಅಸ್ವಸ್ಥಳಾದ್ರೂ ಸತೀಶ್ ನಮಗೆ ಒಂದು ಫೋನ್ ಮಾಡಿ ವಿಷಯ ತಿಳಿಸಿಲ್ಲ. ಪಕ್ಕದಲ್ಲಿಯೇ ಆಸ್ಪತ್ರೆಯಿದ್ದರೂ ನನ್ನ ಮಗಳನ್ನು ಕರೆದುಕೊಂಡು ಹೋಗಿಲ್ಲ. ಇದೇ ನವೆಂಬರ್ 9ರಂದು ಚಂದನಾ ತನ್ನ ಹುಟ್ಟುಹಬ್ಬವನ್ನು ಡ್ಯಾನ್ಸ್ ಕ್ಲಾಸ್ ನಲ್ಲಿ ಆಚರಿಸಿಕೊಳ್ಳುತ್ತೇನೆ ಎಂದು ಹೇಳಿ ತಯಾರಿ ನಡೆಸಿದ್ದಳು ಎಂದು ಚಂದನಾ ತಾಯಿ ಜ್ಯೋತಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Advertisement
ಹಲವು ಅನುಮಾನಗಳು: ಬಾಲಕಿ ಚಂದನಾ ಸ್ವತಃ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳಾ ಅಥವಾ ಬೇರೆ ಯಾರಾದರೂ ಬಲವಂತವಾಗಿ ಕೊಟ್ಟಿದ್ದಾರಾ ಎಂಬುದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಇತ್ತ ಚಂದನಾಳ ಡ್ಯಾನ್ಸ್ ಮಾಸ್ಟರ್ ಸತೀಶ್ ಆಸ್ಪತ್ರೆಗೆ ದಾಖಲಾಗಿದ್ದು, ಇದೂವರೆಗೂ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಚಂದನಾ ಗೆಳತಿ ಯಾಕೆ ಹೇನಿನ ಔಷಧಿಯನ್ನು ತಂದುಕೊಟ್ಟಿದ್ದಾಳೆ ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಪ್ರತಿದಿನ ಚಂದನಾಳನ್ನು ಕ್ಲಾಸ್ ನಲ್ಲಿ ನಿರ್ಲಕ್ಷ್ಯ ಮಾಡಿ, ಡ್ಯಾನ್ಸ್ ನಲ್ಲಿ ಹಿಂದೆ ನಿಲ್ಲಿಸುತ್ತಿದ್ದರೂ ಎಂದು ಚಂದನಾ ತಾಯಿ ಹೇಳುತ್ತಾರೆ. ಈ ಕಾರಣಕ್ಕೆ ಚಂದನಾ ಮನನೊಂದು ಆತ್ಮಹತ್ಯೆ ಶರಣಾಗಿರಬಹುದಾ ಎನ್ನುವ ಮತ್ತೊಂದು ಪ್ರಶ್ನೆ ಎದ್ದಿದೆ.
ಇನ್ನು ಚಂದನಾ ಪೋಷಕರು ದುಃಖಭರಿತರಾಗಿದ್ದು, ಕ್ಷಣ ಕ್ಷಣಕ್ಕೂ ಗೊಂದಲಮಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅಸಲಿಗೆ ಡಾನ್ಸ್ ಕ್ಲಾಸ್ ನಲ್ಲಿ ನಿಜಕ್ಕೂ ನಡೆದಿದ್ದೇನು? ಆಕೆಯ ಗೆಳತಿ ಹೇಳುವ ಆ ಬಾಲಕಿ ಯಾರು? ಎಂಬ ಮುಂತಾದ ಪ್ರಶ್ನೆಗಳಿಗೆ ಉತ್ತರ ಪೊಲೀಸ್ ತನಿಖೆಯಿಂದ ಮಾತ್ರ ಸಿಗಲಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಚಂದನಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 174ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಿದ್ದಾರೆ.