BellaryDistrictsKarnatakaLatestMain Post

ಕಲುಷಿತ ನೀರು ಕುಡಿದು ಬಾಲಕಿ ಸಾವು

Advertisements

ಬಳ್ಳಾರಿ: ಬಳ್ಳಾರಿ ಹಾಗೂ ವಿಜಯನಗರ ಅವಳಿ ಜಿಲ್ಲೆಗಳಿಗೆ ಅದೇನಾಗಿದೆಯೋ ಗೊತ್ತಿಲ್ಲ. ಪದೇ ಪದೇ ಕಲುಷಿತ ನೀರಿನಿಂದ ಪ್ರಾಣಪಕ್ಷಿ ಹಾರಿಹೋಗ್ತಿವೆ. ವಿಜಯನಗರ ಜಿಲ್ಲೆಯ ಮಕರಬ್ಬಿಯಲ್ಲಿ 8 ಜನರ ಸಾವಿನ ಪ್ರಕರಣ ಮಾಸುವ ಮುನ್ನವೇ ಅದೇ ಬಗೆಯ ಮತ್ತೊಂದು ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ವರದಿಯಾಗಿದೆ.

ಕಳೆದ ಆರು ತಿಂಗಳ ಕೆಳಗೆ ವಿಜಯನಗರ ಜಿಲ್ಲೆಯ ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 8 ಜನ ಸಾವನ್ನಪ್ಪಿದ್ದರು. ಇದೀಗ ಬಳ್ಳಾರಿಯ ಸರದಿ ಆರಂಭವಾಗಿದೆ. ಜಿಲ್ಲೆಯ ಕಂಪ್ಲಿ ತಾಲೂಕಿನ ಗೋನಾಳ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 11 ವರ್ಷದ ಬಾಲಕಿ ಸುಕನ್ಯಾ ಸಾವನ್ನಪ್ಪಿದ್ದಾಳೆ. ಗ್ರಾಮದ 20ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಅಸ್ವಸ್ಥಗೊಂಡವರಿಗೆ ಗ್ರಾಮದ ಶಾಲೆಯಲ್ಲಿಯೇ ತಾತ್ಕಾಲಿಕ ಆಸ್ಪತ್ರೆ ತೆರೆದು ಚಿಕಿತ್ಸೆ ನೀಡಲಾಗುತ್ತಿದೆ.

ಸುಕನ್ಯಾಳಿಗೆ ಏಕಾಏಕಿ ವಾಂತಿ ಬೇಧಿ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಆಸ್ಪತ್ರೆಗೆ ಕೊಂಡೊಯ್ಯುವಾಗ ಸುಕನ್ಯಾ ಮೃತಪಟ್ಟಿದ್ದಾಳೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ನಾರಿಹಳ್ಳದಲ್ಲಿ ನೀರು ಹರಿದಿದೆ. ಇದೇ ನೀರನ್ನು ಗ್ರಾಪಂನವರು ಸರಬರಾಜು ಮಾಡಿರುವುದೇ ಈ ಘಟನೆಗೆ ಕಾರಣ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ. ಇದನ್ನೂ ಓದಿ: ನಾಲ್ವರು ಕಾಂಗ್ರೆಸ್ ಸಂಸದರು ಲೋಕಸಭೆಯಿಂದ ಅಮಾನತು

ಇನ್ನು ಇದೇ ವೇಳೆ ಗ್ರಾಮಕ್ಕೆ ಭೇಟಿ ನೀಡಿದ ಡಿಎಚ್‍ಒ ಜನಾರ್ದನ್ ಅವರೊಂದಿಗೆ ಗ್ರಾಮಸ್ಥರು ವಾಗ್ವಾದ ಮಾಡಿದ ಘಟನೆಯೂ ನಡೆಯಿತು. ವಿಜಯನಗರ ಜಿಲ್ಲೆಯ ಮಕರಬ್ಬಿಯಲ್ಲಿ ಆಗಿರೋ ಘಟನೆಯಿಂದ ಎಚ್ಚೆತ್ತಿರೋ ಬಳ್ಳಾರಿ ಜಿಲ್ಲಾ ಆರೋಗ್ಯ ಇಲಾಖೆ ಕೂಡಲೇ ಗೋನಾಳ ಗ್ರಾಮಕ್ಕೆ ತೆರಳಿ ಅಲ್ಲಿನ ಶಾಲೆಯಲ್ಲಿಯೇ ತಾತ್ಕಾಲಿಕ ಆಸ್ಪತ್ರೆ ತೆರೆದು ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡುತ್ತಿದೆ. ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿರುವವರಿಗೆ ಕಂಪ್ಲಿ ತಾಲೂಕು ಆಸ್ಪತ್ರೆ ಹಾಗೂ ಬಳ್ಳಾರಿಯ ವಿಮ್ಸ್‌ಗೆ ಕಳುಹಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕುಡಿಯುವ ನೀರು ಸರಬರಾಜಿಗೆ ಪರ್ಯಾಯ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ – ಉತ್ತರ ಕನ್ನಡ ಜಿಲ್ಲೆ ಜನರ ಹೋರಾಟಕ್ಕೆ ಕುಮಾರಸ್ವಾಮಿ ಬೆಂಬಲ

Live Tv

Leave a Reply

Your email address will not be published.

Back to top button