ನವದೆಹಲಿ: 11 ವರ್ಷದ ಬಾಲಕಿಯೊಬ್ಬಳು ಶಾಲೆಯಲ್ಲಿ ಗೆಳತಿ ತಂದಿದ್ದ ಬಾಟಲ್‍ನಲ್ಲಿ ನೀರು ಕುಡಿದು ಸಾವನ್ನಪ್ಪಿದ್ದು, ಬಾಟಲಿಯಲ್ಲಿ ಆ್ಯಸಿಡ್ ಮಿಶ್ರಿತ ನೀರು ಇತ್ತು ಎಂದು ಪೊಲೀಸರು ಶಂಕಿಸಿದ್ದಾರೆ.
ಖಾಸಗಿ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ಬಾಲಕಿ ಮೃತಪಟ್ಟಿದ್ದಾಳೆ. ಈಶಾನ್ಯ ದೆಹಲಿಯ ಹರ್ಷ್ ವಿಹಾರ್ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಬುಧವಾರದಂದು ವಿದ್ಯಾರ್ಥಿನಿಯೊಬ್ಬಳು ಗೊತ್ತಿಲ್ಲದೆ ಆ್ಯಸಿಡ್ ಮಿಶ್ರಿತ ನೀರು ತುಂಬಿದ್ದ ಬಾಟಲಿಯನ್ನು ಶಾಲೆಗೆ ತಂದಿದ್ದಳು. ಮಧ್ಯಾಹ್ನ ಊಟಕ್ಕೆ ಸಮಯದಲ್ಲಿ ವಿದ್ಯಾರ್ಥಿನಿ ತನ್ನ ಗೆಳತಿಯರ ಜೊತೆ ಕೂತು ಊಟ ಮಾಡುತ್ತಿದ್ದಳು. ಈ ವೇಳೆ ಆಕೆಯ ಗೆಳತಿಯೊಬ್ಬಳು ಈ ಆ್ಯಸಿಡ್ ಮಿಶ್ರಿತ ನೀರನ್ನು ಕುಡಿದಿದ್ದಾಳೆ. ಬಳಿಕ ಒದ್ದಾಡುತ್ತ ನೆಲಕ್ಕೆ ಬಿದ್ದಿದ್ದಾಳೆ.
ತಕ್ಷಣ ಬಾಲಕಿಯನ್ನು ಶಾಲಾ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಸದ್ಯ ಬಾಲಕಿ ಕುಡಿದ ನೀರಿನ ಬಾಟಲಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿದ್ದು, ನೀರಿನಲ್ಲಿ ಯಾವ ಆ್ಯಸಿಡ್ ಅಂಶವಿತ್ತು ಎಂದು ನಿಖರ ಮಾಹಿತಿ ಲ್ಯಾಬ್ ರಿಪೋರ್ಟ್ ಬಂದ ಮೇಲೆ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv