ಗದಗ: ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡದ ಹಿನ್ನೆಲೆಯಲ್ಲಿ ಕಲುಷಿತ ನೀರನ್ನೇ ಸೇವಿಸಿ 9 ವರ್ಷದ ಬಾಲಕಿ ಸಾವನ್ನಪ್ಪಿದ್ದು, ಸುಮಾರು 40ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರೋ ಘಟನೆ ಗದಗ ಜಿಲ್ಲೆಯ ತಂಗೋಡ ಗ್ರಾಮದಲ್ಲಿ ನಡೆದಿದೆ.
ಶಿರಹಟ್ಟಿ ತಾಲೂಕಿನ ತಂಗೋಡ ಗ್ರಾಮದಲ್ಲಿ ಕಳೆದ 15 ದಿನಗಳಿಂದ ತುಂಗಭದ್ರಾ ನೀರು ಸರಬರಾಜು ಮಾಡಿಲ್ಲ. ವಿಧಿಯಿಲ್ಲದೆ ಲಭ್ಯವಿರೋ ಕಲುಷಿತ ನೀರನ್ನೇ ಸೇವಿಸಬೇಕಾಗಿದೆ. ಹೀಗೆ ಈ ನೀರನ್ನು ಸೇವಿಸಿರೋ ಒಂಬತ್ತು ವರ್ಷದ ಕಾವ್ಯ ಮೃತಪಟ್ಟಿದ್ದಾಳೆ.
ಅಲ್ಲದೆ ಈರಣ್ಣ ಕಮ್ಮಾರ(10), ಪೂರ್ಣಿಮಾ(5) ಸೇರಿದಂತೆ ಗ್ರಾಮದಲ್ಲಿ 40ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದಾರೆ. ಅಸ್ವಸ್ಥಗೊಂಡವರನ್ನು ಶಿರಹಟ್ಟಿ ತಾಲೂಕು ಆಸ್ಪತ್ರೆ ಹಾಗೂ ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಸಮರ್ಪಕ ಕುಡಿಯೋ ನೀರು ಸರಬರಾಜು ಮಾಡದ ತಾಲೂಕು ಆಡಳಿತವೇ ಈ ಘಟನೆಗೆ ಹೊಣೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.