ಬಳ್ಳಾರಿ: ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
22 ವರ್ಷದ ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಸಾವನ್ನಪ್ಪಿರುವ ಯುವತಿ ಕೊಪ್ಪಳ ಜಿಲ್ಲೆಯ ಕನಕಗಿರಿ ಮೂಲದವಳು ಎಂದು ತಿಳಿದು ಬಂದಿದೆ. ಮೃತ ಅಶ್ವಿನಿ ಭಾನುವಾರವೇ ಕೊಪ್ಪಳದಿಂದ ಬಳ್ಳಾರಿಗೆ ಬಂದು ಒಂದು ಖಾಸಗಿ ಹೋಟೆಲಿನಲ್ಲಿ ರೂಮ್ ಬುಕ್ ಮಾಡಿಕೊಂಡು ತಂಗಿದ್ದಳು.
ಇಂದು ಬೆಳಗ್ಗೆ ಬಸ್ ನಿಲ್ದಾಣಕ್ಕೆ ಬಂದು ಕುಳಿತಿದ್ದಾಳೆ. ಬಳಿಕ ಇದ್ದಕ್ಕಿದ್ದಂತೆ ನೆಲಕ್ಕೆ ಬಿದ್ದು ನರಳಾಡಲು ಶುರು ಮಾಡಿದ್ದಾಳೆ. ಆಗ ಸ್ಥಳದಲಿದ್ದವರು ತಕ್ಷಣ ಆಕೆಯನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಶ್ವಿನಿ ಮೃತಪಟ್ಟಿದ್ದಾಳೆ. ಆದರೆ ಮೃತ ಅಶ್ವಿನಿ ಹೋಟೆಲ್ ರೂಮಿನಿಂದ ಬರುವಾಗಲೇ ವಿಷ ಸೇವಿಸಿದ್ದಳಾ ಅಥವಾ ಬಸ್ ನಿಲ್ದಾಣಕ್ಕೆ ಬಂದು ಕುಡಿದಿದ್ದಾಳ ಎಂದು ತಿಳಿದು ಬಂದಿಲ್ಲ.
ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಹೊಸಪೇಟೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಯುವತಿಯ ಆತ್ಮಹತ್ಯೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ.