ಗಾಂಧಿನಗರ: ಸುಮಾರು ನಾಲ್ಕು ತಿಂಗಳ ಕಾಲ 15 ವರ್ಷದ ಅಂಧ ಬಾಲಕಿ ಮೇಲೆ ಇಬ್ಬರು ಅಂಧ ಶಿಕ್ಷಕರು ನಿರಂತರವಾಗಿ ಅತ್ಯಾಚಾರ ಎಸಗಿರುವ ಭಯಾನಕ ಘಟನೆ ಗುಜರಾತಿನಲ್ಲಿ ನಡೆದಿದೆ.
ದೇವಾಲಯಗಳ ಪಟ್ಟಣ ಎಂದೇ ಖ್ಯಾತಿ ಪಡೆದಿರುವ ಗುಜರಾತಿನ ಅಂಬಾಜಿಯಲ್ಲಿ ಘಟನೆ ನಡೆದಿದೆ. ಖಾಸಗಿ ಟ್ರಸ್ಟ್ ನಡೆಸುತ್ತಿರುವ ಶಾಲೆಯಲ್ಲಿ ಮಗುವಿನ ಮೇಲೆ ಅತ್ಯಾಚಾರವಾಗಿದೆ. ಇಬ್ಬರು ಅಂಧ ಶಿಕ್ಷಕರು ನನ್ನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಅಂಧ ಬಾಲಕಿ ಆರೋಪಿಸಿದ್ದಾಳೆ.
ಸುಮಾರು ನಾಲ್ಕು ತಿಂಗಳಿಂದ 30 ವರ್ಷದ ಜಯಂತಿ ಠಾಕೋರ್ ಹಾಗೂ 62 ವರ್ಷದ ಚಮನ್ ಠಾಕೋರ್ ತನ್ನ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ.
ಆರೋಪಿ ಶಿಕ್ಷಕರನ್ನು ಪತ್ತೆ ಹಚ್ಚಲು ಪೊಲೀಸರು ಮ್ಯಾನ್‍ಹಂಟ್ ಪ್ರಾರಂಭಿಸಿದ್ದು, ಇದರಲ್ಲಿ ಒಬ್ಬ 62 ವರ್ಷ ವಯಸ್ಸಿನವನಾಗಿದ್ದಾನೆ. ಅತ್ಯಾಚಾರ ನಡೆದಿರುವ ಕುರಿತು ಬಾಲಕಿಯ ಚಿಕ್ಕಮ್ಮ ದೂರು ನೀಡಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಾಗಿದೆ.
ದೀಪಾವಳಿ ಹಬ್ಬಕ್ಕೆ ಬಾಲಕಿ ತನ್ನ ಸ್ವಂತ ಊರು ಪಟಾನ್ ಜಿಲ್ಲೆಯ ರಾಧನಪುರ ತಾಲೂಕಿನ ಪ್ರೇಮನಗರಕ್ಕೆ ಆಗಮಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಬ್ಬಕ್ಕೆ ಬಂದ ಬಾಲಕಿ ಮರಳಿ ಶಾಲೆಗೆ ಹೋಗಲು ನಿರಾಕರಿಸಿದ್ದಾಳೆ. ಆಗ ಆಕೆಯ ಚಿಕ್ಕಮ್ಮ ಏಕೆ ಎಂದು ಕೇಳಿ ಆಕೆಯನ್ನು ತಬ್ಬಿಕೊಂಡಿದ್ದಾಳೆ. ಈ ವೇಳೆ ಘಟನೆ ಕುರಿತು ಬಾಲಕಿ ತನ್ನ ಚಿಕ್ಕಮ್ಮನಿಗೆ ವಿವರಿಸಿದ್ದು, ನಂತರ ಚಿಕ್ಕಮ್ಮ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ.
ವರದಿ ಪ್ರಕಾರ, ಈ ವರ್ಷ ಜುಲೈನಲ್ಲಿ ಸಂಗೀತ ಕಲಿಯಲು ಅಂಬಾಜಿಯ ಶಾಲೆಗೆ ಸೇರುವುದಕ್ಕೂ ಮೊದಲು ಬಾಲಕಿ ಸ್ಥಳೀಯ ಶಾಲೆಯಲ್ಲಿ 8ನೇ ತರಗತಿವರೆಗೆ ಅಧ್ಯಯನ ಮಾಡಿದ್ದಾಳೆ. ಈ ಶಾಲೆಗೆ ಸೇರಿದ ನಂತರ ಶಿಕ್ಷಕರು ದುರ್ನಡತೆ ತೋರಿದ್ದು, ಇಬ್ಬರು ಶಿಕ್ಷಕರ ನಡವಳಿಕೆ ಕುರಿತು ಶಾಲೆಯ ಇತರ ಮೂವರು ಶಿಕ್ಷಕರಿಗೆ ಮಾಹಿತಿ ನೀಡಿದ ನಂತರ ಲೈಂಗಿಕ ದೌರ್ಜನ್ಯವನ್ನು ನಿಲ್ಲಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿ, ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ. ಪರಾರಿಯಾಗಿರುವ ಶಿಕ್ಷಕರನ್ನು ಬಂಧಿಸಲು ಮ್ಯಾನ್‍ಹಂಟ್ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ವರ್ಷ ಪೊಕ್ಸೊ ಕಾಯ್ದೆಗೆ ಕಠಿಣ ಶಿಕ್ಷೆಗಳನ್ನು ಸೇರಿಸಿದೆ. ಮರಣ ದಂಡನೆಯನ್ನು ಸಹ ಸೇರಿಸಲಾಗಿದೆ.