ಕಲಬುರಗಿ: ಮನೆಯಲ್ಲಿ ಮಕ್ಕಳು ತಪ್ಪು ಮಾಡಿದಾಗ ಹೆತ್ತವರು ಬೈಯ್ಯುವುದು ಸಹಜ. ಆದರೆ ತಾಯಿ ಬೈದಿದ್ದನ್ನೆ ಮನಸಿಗೆ ಹಚ್ಚಿಕೊಂಡ ಯುವತಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ಕಲಬುರಗಿ ನಗರದಲ್ಲಿ ಗುರುವಾರದಂದು ನಡೆದಿದೆ.
ರೈಲ್ವೆ ಚಾಲಕನ ಸಮಯಪ್ರಜ್ಞೆಯಿಂದ ಯುವತಿಯ ಜೀವ ಉಳಿದಿದೆ. ಯುವತಿಯ ಬಲಗಾಲು ತುಂಡಾಗಿದ್ದು, ಇದೀಗ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಕಲಬುರಗಿ ನಗರದ ಪಿಡಬ್ಲೂಡಿ ಕ್ವಾಟರ್ಸ್ ನಿವಾಸಿಯಾಗಿರುವ 19 ವರ್ಷದ ಸಿಮ್ರಾನ್ ಅನ್ನೋ ಯುವತಿ ಗುರುವಾರ ಮುಂಜಾನೆ ಕೋರಂಟಿ ಹನುಮಾನ ದೇವಸ್ಥಾನದ ಸಮೀಪ ದಾದರ್-ಚೆನ್ನೈ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಇದನ್ನು ಗಮನಿಸಿದ ಚಾಲಕ ರೈಲನ್ನು ನಿಧಾನಗೊಳಿಸಿದ್ದಾರೆ. ಆದರೆ ಯುವತಿಯ ಜೀವ ಉಳಿಸಲಿಕ್ಕೆ ಸಾಧ್ಯವಾಯಿತೇ ವಿನಃ, ಆಕೆಯ ಕಾಲನ್ನು ರಕ್ಷಿಸಲು ಸಾಧ್ಯವಾಗಿಲ್ಲ. ನಂತರ ಆಕೆಯನ್ನು ರೈಲ್ವೆ ಪೊಲೀಸರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೈಮೇಲೆ ‘ಐ ಮಿಸ್ ಯೂ ಮಮ್ಮಿ, ಡ್ಯಾಡಿ, ಮತ್ತು ಫ್ರೆಂಡ್ಸ್’ ಅಂತ ಬರೆದುಕೊಂಡಿದ್ದು ಗೊತ್ತಾಗಿತ್ತು. ನಂತರ ಮಧ್ಯಾಹ್ನದ ವೇಳೆಗೆ ಆಕೆಯ ಗುರುತು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾಯಿ ಜೊತೆ ಜಗಳವಾಡಿಕೊಂಡಿದ್ದ ಸಿಮ್ರಾನ್: ಬಿಎಸ್ಸಿ ನರ್ಸಿಂಗ್ ಓದುತ್ತಿದ್ದ ಸಿಮ್ರಾನ್ ಕಳೆದ ರಾತ್ರಿ ತಾಯಿ ಜೊತೆ ಜಗಳವಾಡಿಕೊಂಡಿದ್ದಳು. ತಾಯಿ ಹೆಚ್ಚು ಮೊಬೈಲ್ ಬಳಸಬೇಡ ಎಂದು ಹೇಳಿದ್ದರಂತೆ. ಇದರಿಂದ ಮನನೊಂದ ಯುವತಿ ಗುರುವಾರ ನಸುಕಿನ ಜಾವದಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಇದೀಗ ಸಿಮ್ರಾನ್ ಳನ್ನು ಆಕೆಯ ಹೆತ್ತವರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.