ಬೆಳಗಾವಿ: ಪೊಲೀಸರು ತಡರಾತ್ರಿ ಮನೆಗೆ ನುಗ್ಗಿ ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಯುವತಿಯೊಬ್ಬರು ಆರೋಪ ಮಾಡಿದ್ದಾರೆ. ನಾನು ಮದುವೆಯಾಗುವ ಹುಡುಗನನ್ನ ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಯುವತಿ ಹಾಗೂ ಆಕೆಯ ಕುಟುಂಬಸ್ಥರು ಆರೋಪ ಮಾಡುತ್ತಿದ್ದು, ತಮಗೆ ನ್ಯಾಯ ಒದಗಿಸುವಂತೆ ಇದೀಗ ನಗರ ಪೊಲೀಸ್ ಕಮಿಷನರ್ ಕಚೇರಿ ಮೆಟ್ಟಿಲೇರಿದ್ದಾರೆ.
Advertisement
ಹೀಗೆ ಗುಂಪಾಗಿ ನಿಂತಿರುವ ಇವರು ಬೆಳಗಾವಿಯ ವೈಭವ ನಗರದ ನಿವಾಸಿಗಳು. ಎಲ್ಲರು ಒಂದೆ ಕುಟುಂಬಕ್ಕೆ ಸೇರಿದ್ದು ತಮಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ತಡರಾತ್ರಿ 12 ಗಂಟೆಗೆ ನಮ್ಮ ಮನೆಗೆ ನುಗ್ಗಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ. ನಂತರ ನಾನು ಮದುವೆ ಆಗುವ ಹುಡುಗನನ್ನ ಅರೆಸ್ಟ್ ಮಾಡಿಕೊಂಡು ಹೋಗಿದ್ದಾರೆ ಎಂದು ಯುವತಿ ಹಾಗೂ ಆಕೆಯ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
Advertisement
Advertisement
ಸೋಮವಾರ ನನಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ರಾತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ನಾನು ಮದುವೆಯಾಗುವ ಹುಡುಗ ವಸೀಮ್ ನನ್ನನ್ನ ಮನೆಗೆ ತಂದು ಬಿಟ್ಟ. ಸ್ವಲ್ಪ ಸಮಯ ಮನೆಯಲ್ಲೆ ಇದ್ದ. ಅದೇ ವೇಳೆ ಎಪಿಎಂಸಿ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಕಾಲಿಮಿರ್ಚಿ ಸೇರಿ ನಾಲ್ಕು ಜನ ಪೊಲೀಸರು ತಡರಾತ್ರಿ ನಮ್ಮ ಮನೆಗೆ ನುಗ್ಗಿ ವೈಶ್ಯಾವಾಟಿಕೆ ನಡೆಸುತ್ತಿದ್ದೀರಿ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾರೆ. ನಾನು ಮದುವೆಯಾಗುವ ಹುಡುಗನನ್ನ ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರ ವಿರುದ್ಧ ಆರೋಪಿದ್ದಾರೆ.
Advertisement
ಪೊಲೀಸ್ ಇನ್ಸ್ ಪೆಕ್ಟರ್ ಕಾಲಿಮಿರ್ಚಿ ವಿರುದ್ಧ ಪ್ರಕರಣ ದಾಖಲಿಸಲು ನಗರ ಪೊಲೀಸ್ ಆಯುಕ್ತರ ಕಚೇರಿ ಮೆಟ್ಟಿಲೇರಿದ್ದಾರೆ. ಪೊಲೀಸ್ ಇನ್ಸ್ ಪೆಕ್ಟರ್ ನಾನು ವೈಶ್ಯಾವಾಟಿಕೆ ನಡೆಸುತ್ತಿದ್ದೇನೆ ಎಂದು ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಸಮಾಜದಲ್ಲಿ ನಾನು ಬದುಕುವುದು ಹೇಗೆ? ಮೊದಲು ನನ್ನ ಮೇಲಿನ ಆರೋಪಗಳನ್ನ ಸಾಬೀತು ಮಾಡಲಿ. ಇಲ್ಲವಾದರೆ ಪೊಲೀಸ್ ಮೇಲಾಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲಿ. ಸುಳ್ಳು ಆರೋಪ ಮಾಡುತ್ತಿರುವ ಎಪಿಎಂಸಿ ಇನ್ಸ್ ಪೆಕ್ಟರ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಯುವತಿ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಎಪಿಎಂಸಿ ಪೊಲೀಸ್ ಇನ್ಸ್ ಪೆಕ್ಟರ್ ಕಾಲಿಮಿರ್ಚಿ, ವೈಶಾವಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕೆಲವರನ್ನ ವಶಕ್ಕೆ ಪಡೆದಿದ್ದೇವೆ ಹೊರತು ಬೇರೆ ಯಾವುದೇ ಕಾರಣಕ್ಕೆ ಅಲ್ಲ ಎಂದು ಯುವತಿ ಮಾಡುತ್ತಿರುವ ಆರೋಪಗಳನ್ನ ತಳ್ಳಿ ಹಾಕಿದ್ದಾರೆ. ಮಾಹಿತಿ ಮೇರೆಗೆ ನಿನ್ನೆ ರಾತ್ರಿ ವೈಭವ ನಗರದ ಮನೆ ಮೇಲೆ ದಾಳಿ ನಡೆಸಿದಾಗ ವೈಶ್ಯಾವಾಟಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
ವಾಸಿಮ್ ಕಸ್ಟಮರ್ ಗಳನ್ನ ಕರೆದುಕೊಂಡು ಬರ್ತಿದ್ದ: ಎರಡು ತಿಂಗಳ ಹಿಂದೆ ವೈಭವ ನಗರ ಪ್ರದೇಶದಲ್ಲಿ ಬ್ಯೂಟಿಪಾರ್ಲರ್ ಹೆಸರಲ್ಲಿ ವೈಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂದು ಕೆಲವರು ದೂರು ನೀಡಿದ್ದರು. ಯುವತಿ ವಸೀಮ್ ಎಂಬ ವ್ಯಕ್ತಿಯ ಜೊತೆ ಸೇರಿ ದಂಧೆ ನಡೆಸುತ್ತಿದ್ದಳು. ಅಕ್ಕಪಕ್ಕದ ಜನರು ವಾಸಿಮ್ ಬಗ್ಗೆ ಪ್ರಶ್ನೆ ಮಾಡಿದರೆ ಇಬ್ಬರು ಮದುವೆಯಾಗುತ್ತಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದರು. ವಾಸಿಮ್ ಕಸ್ಟಮರ್ ಗಳನ್ನ ಹುಡುಗಿಯ ಮನೆಗೆ ಕರೆದುಕೊಂಡು ಬರುತ್ತಿದ್ದ. ಅಕ್ಕಪಕ್ಕದ ಜನರು ಕೂಡ ಇದರಿಂದ ಬೇಸತ್ತು ಹೋಗಿದ್ದರು. ನಿನ್ನೆ ರಾತ್ರಿ ಖಚಿತ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ನಡೆಸಿದಾಗ ದಂಧೆಯ ಪ್ರಮುಖ ಆರೋಪಿ ವಾಸಿಮ್‍ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಒಂದೆಡೆ ಯುವತಿ ನಾನು ಯಾವುದೇ ದಂಧೆ ನಡೆಸುತ್ತಿಲ್ಲ. ಪೊಲೀಸರೇ ಹೆಣೆದ ಸುಳ್ಳು ಕಥೆ ಎಂದು ಪೊಲೀಸರ ಮೇಲೆ ಆರೋಪ ಮಾಡುತ್ತಿದ್ದರೆ, ಇನ್ನೊಂದೆಡೆ ಪೊಲೀಸರು ತಮ್ಮ ಕರ್ತವ್ಯ ನಿಭಾಯಿಸಿರುವುದಾಗಿ ಹೇಳುತ್ತಿದ್ದಾರೆ. ಒಟ್ಟಾರೆ ಅಂದು ರಾತ್ರಿ ನಡೆದಿದ್ದಾದ್ರೂ ಏನು ಎಂಬ ಸತ್ಯಾಸತ್ಯತೆ ತನಿಖೆ ಮುಖಾಂತರ ಹೊರ ಬರಬೇಕಾಗಿದೆ.