– ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಮಕ್ಕಳ ಆಯೋಗ
ಬೆಂಗಳೂರು: ಗಿರಿನಗರದಲ್ಲಿ ತಾಯಿಯಿಂದಲೇ ಹಲ್ಲೆಗೊಳಗಾದ ಪುಟ್ಟ ಕಂದಮ್ಮನನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಹಾಗೂ ಡಾ. ತಿಪ್ಪೇಸ್ವಾಮಿ ಕೆ.ಟಿ. ಇಂದು ಭೇಟಿಯಾಗಿದ್ದಾರೆ.
ಹಲ್ಲೆಗೊಳಗಾದ ಬಾಲಕನನ್ನು ನಿಮ್ಹಾನ್ಸ್ ಬಳಿಯ ಬಾಲ ಮಂದಿರದ ಶಿಶು ಮಂದಿರಕ್ಕೆ ಸೇರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕು ಆಯೋಗದವರು (Child Rights Commission), ಮಗುವನ್ನು ಭೇಟಿ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಸದ್ಯ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಇದನ್ನೂ ಓದಿ: ಸರ್ಕಾರದ FSL ವರದಿಯನ್ನ ನಾನು ನೋಡಿಯೇ ಇಲ್ಲ: ಪ್ರಿಯಾಂಕ್ ಖರ್ಗೆ
ಘಟನೆ ವಿವರ: ಬೆಂಗಳೂರಿನ ಗಿರಿನಗರದ (Girinagar Baby) ವೀರಭದ್ರೇಶ್ವರ ನಗರದಲ್ಲಿ ಪುಟ್ಟ ಕಂದಮ್ಮನ ಮೇಲೆ ಪಾಪಿ ತಾಯಿ ಹಲ್ಲೆ ನಡೆಸಿದ್ದಾಳೆ. ಹಲ್ಲೆ ನಡೆಸಿದ ಪರಿಣಾಮ ಮಗುವಿನ ದೇಹದ ತುಂಬೆಲ್ಲಾ ಗಾಯದ ಗುರುತುಗಳಾಗಿದೆ. ತಾಯಿ ಕೆಲಸಕ್ಕೆ ಹೋಗುತ್ತಿದ್ದು, ಬೆಳಗ್ಗೆ ಕೆಲಸಕ್ಕೆ ಹೋಗುವಾಗ ಬೀಗ ಹಾಕಿ ಹೋದರೆ ರಾತ್ರಿ ಬರೋವರೆಗೂ ಮಗುವನ್ನು ಕೂಡಿ ಹಾಕಿರುತ್ತಿದ್ದಳು. ಅಲ್ಲದೇ ಮಗುವಿನ ಮೇಲೆ ಹಲ್ಲೆ ನಡೆಸಿ ವಿಕೃತಿ ಮೆರೆದಿದ್ದಾಳೆ.
ಈ ಕುರಿತು ಮಗುವಿನ ತಾಯಿಯನ್ನು ಪ್ರಶ್ನಿಸಿದಾಗ, ತಾನು ಗಂಡನ ಜೊತೆ ವಾಸ ಮಾಡುತ್ತಿಲ್ಲ. ಹಣಕಾಸಿನ ತೊಂದರೆಯಿಂದ ಮಗುವನ್ನು ಕೂಡಿಹಾಕಿ ಕೆಲಸ ಹುಡುಕುತ್ತಿರುವುದಾಗಿ ಹೇಳಿದ್ದಾಳೆ. ಮಧ್ಯಾಹ್ನ ಮಗುವಿಗೆ ಊಟ ಕೊಡಲು ಮಹಿಳೆಯ ಫ್ರೆಂಡ್ ಮನೆಗೆ ಬರುತ್ತಿದ್ದು, ಸದ್ಯ ಈ ಬಗ್ಗೆ ಮಗುವಿನ ತಾಯಿಯನ್ನು ಕರೆಸಿ ಪೊಲೀಸರು ಬುದ್ದಿವಾದ ಹೇಳಿದ್ದಾರೆ. ಅಲ್ಲದೇ ಮಗುವನ್ನು ಮಕ್ಕಳ ಆಯೋಗದ ಸುಪರ್ದಿಗೆ ಒಪ್ಪಿಸಿದ್ದಾರೆ. ಗಂಡ, ಹೆಂಡತಿ ಇಬ್ಬರೂ ಬಂದು ಕೌನ್ಸಿಲಿಂಗ್‍ಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ. ಗಂಡ-ಹೆಂಡತಿ ಇಬ್ಬರೂ ಬಂದು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದರಷ್ಟೇ ಮಗು ನೀಡುವುದಾಗಿ ಮಕ್ಕಳ ಆಯೋಗ ಹೇಳಿದೆ. ಸದ್ಯ ಹಲ್ಲೆಗೊಳಗಾಗಿರುವ ಮಗು ಮಕ್ಕಳ ಆಯೋಗದ ರಕ್ಷಣೆಯಲ್ಲಿದೆ. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಎನ್‍ಸಿಆರ್ ದಾಖಲಾಗಿದೆ. ಇದನ್ನೂ ಓದಿ: ಕೆಫೆ ಬ್ಲಾಸ್ಟ್ ಪ್ರಕರಣ – ಶಂಕಿತ ಉಗ್ರನ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ