ನೆಲಮಂಗಲ: ಮಕರ ಸಂಕ್ರಾಂತಿ ದಿನದಂದು ಎಲ್ಲಡೆ ವಿವಿಧ ದೇವಾಲಯಗಳಲ್ಲಿ ಸಂಭ್ರಮ ಮನೆ ಮಾಡಿದೆ. ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತಿವೆ. ಇತ್ತ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದಕ್ಷಿಣ ಕಾಶಿ ಶ್ರೀ ಕ್ಷೇತ್ರ ಶಿವಗಂಗೆಯಲ್ಲಿ ಬೆಳ್ಳಂಬೆಳಗ್ಗೆ ತೀರ್ಥೋದ್ಭವ ಆಗಿದ್ದು, ಗಿರಿಜಾ ಕಲ್ಯಾಣ ಮಹೋತ್ಸವ ನಡೆದಿದೆ.
ಬೆಳಗ್ಗೆ 6:30ರಿಂದ 7:00 ಗಂಟೆಯೊಳಗೆ ಗಿರಿಜಾ ಕಲ್ಯಾಣೋತ್ಸವ ನಡೆದಿದ್ದು, ಈ ಅಪೂರ್ವ ದೃಶ್ಯವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಇಲ್ಲಿನ ಅರ್ಚಕ ಸೋಮಸುಂದರ ದೀಕ್ಷಿತ್ ನೇತೃತ್ವದಲ್ಲಿ ಗಿರಿಜಾ ಕಲ್ಯಾಣೋತ್ಸವ ನೇರವೇರಿದೆ. ಲೋಕ ಕಲ್ಯಾಣಕ್ಕಾಗಿ ಗಿರಿಜಾ ಮತ್ತು ಶಿವನಿಗೆ ವಿವಾಹ ಜರುಗಿದೆ. ನಾನಾ ಪವಾಡಗಳಿಗೆ ಸಾಕ್ಷಿಯಾಗಿರುವ ಶ್ರೀ ಗಂಗಾಧರೇಶ್ವರ ಸ್ವಾಮಿಯ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೆಲಮಂಗಲ ಪೊಲೀಸರು ಬಿಗಿ ಭದ್ರತೆಯನ್ನ ನೀಡಿದ್ದಾರೆ.
Advertisement
Advertisement
ನೆಲಮಂಗಲ ತಹಶೀಲ್ದಾರ್ ಶ್ರೀನಿವಾಸಯ್ಯ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆದಿದೆ. ಇಂದು ಶಿವಗಂಗೆ ಬೆಟ್ಟಕ್ಕೆ ಬರುವ ಎಲ್ಲಾ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು ಸರತಿ ಸಾಲಿನಲ್ಲಿ ನಿಂತು ಗಂಗಾಧರೇಶ್ವರನ ದರ್ಶನ ಪಡೆಯುತ್ತಿದ್ದಾರೆ.