ಈಗ ಎಲ್ಲೆಡೆ ಗಿಣಿ ಹೇಳಿದ ಕಥೆ ಚಿತ್ರದ ಬಗ್ಗೆ ಚರ್ಚೆಗಳಾಗುತ್ತಿವೆ. ಹೊಸಾ ಥರದ ಶೀರ್ಷಿಕೆಯಿಂದಲೇ ಗಮನ ಸೆಳೆದ ಒಂದಷ್ಟು ಚಿತ್ರಗಳಿವೆಯಲ್ಲಾ ಆ ಸಾಲಿಗೆ ಈ ಸಿನಿಮಾವೂ ಸೇರುತ್ತದೆ. ಅಪ್ಪಟ ಕನ್ನಡತನದ ಕಥೆಯ ಜೊತೆಗೆ, ಅಷ್ಟೇ ಭಿನ್ನವಾದ ಕಥೆಯೊಂದನ್ನು ಈ ಗಿಣಿ ಹೇಳ ಹೊರಟಿದೆ.
ಗಿಣಿ ಹೇಳಿದ ಕಥೆಯನ್ನು ಬುದ್ಧ ಚಿತ್ರಾಲಯ ಲಾಂಛನದಲ್ಲಿ ದೇವ್ ರಂಗಭೂಮಿ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದೂ ಅವರೇ. ಇದರೊಂದಿಗೆ ನಾಯಕನಾಗಿಯೂ ಅವರು ಚಿತ್ರರಂಗಕ್ಕೆ ಅಡಿಯಿರಿಸುತ್ತಿದ್ದಾರೆ. ಇದನ್ನು ನಾಗರಾಜ್ ಉಪ್ಪುಂದ ನಿರ್ದೇಶನ ಮಾಡಿದ್ದಾರೆ.
ಹಾಗಾದರೆ ಈ ಗಿಣಿ ಯಾವ ಜಾಡಿನ ಕಥೆ ಹೇಳ ಹೊರಟಿದೆ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿದೆ. ಅದಕ್ಕೆ ಚಿತ್ರತಂಡದ ಕಡೆಯಿಂದ ಮತ್ತಷ್ಟು ಕೌತುಕ ಮೂಡಿಸೋ ಒಂದಷ್ಟು ವಿಚಾರಗಳೇ ಹೊರ ಬೀಳುತ್ತವೆ. ಈ ಚಿತ್ರದಲ್ಲಿ ಸಿದ್ಧಸೂತ್ರಗಳ ಸುಳಿವಿರೋದಿಲ್ಲ. ಇದರ ಪ್ರಧಾನ ಉದ್ದೇಶವೇ ಮನರಂಜನೆ. ಭರಪೂರ ಹಾಸ್ಯದ ಜೊತೆಗೇ ಗಂಭೀರವಾದ ವಿಚಾರಗಳನ್ನೂ ದಾಟಿಸೋ ಸದುದ್ದೇಶವನ್ನ ಈ ಚಿತ್ರ ಒಳಗೊಂಡಿದೆ. ಪ್ರತೀ ವರ್ಗದ ಪ್ರೇಕ್ಷಕರಿಗೂ ತಲುಪಿಕೊಳ್ಳುವ ಮಹದಾಸೆಯಿಂದಲೇ ಒಟ್ಟಾರೆ ಚಿತ್ರ ಸಿದ್ಧಗೊಂಡಿದೆ.
ಗಿಣಿ ಹೇಳಿದ ಕಥೆಯಲ್ಲಿ ಒಂದು ಮಧುರವಾದ ಪ್ರೇಮ ಕಥೆಯೂ ಇದೆ. ಗೀತಾಂಜಲಿ ಎಂಬ ಹೊಸ ಹುಡುಗಿ ಈ ಮೂಲಕ ನಾಯಕಿಯಾಗಿ ದೇವ್ ಗೆ ಜೊತೆಯಾಗಿದ್ದಾರೆ. ಇಲ್ಲಿ ಹೀರೋಯಿಸಂ ಇಲ್ಲ. ಆದರೆ ನಿಜವಾದ ಹೀರೋಗಳು ಯಾರೆಂಬುದರ ಬಗ್ಗೆ ವಿವರಣೆಯಿದೆ. ಕಥೆಯೇ ಪಾತ್ರಗಳನ್ನು ಎಲ್ಲಿ ತಲುಪಿಸಬೇಕೋ ಅಲ್ಲಿಗೆ ಕೊಂಡೊಯ್ದು ಬಿಡುವಂಥಾ ಕೆಲಸವನ್ನೂ ನಿಭಾಯಿಸುತ್ತದೆಯಂತೆ.
ಇನ್ನುಳಿದಂತೆ ಸಂಗೀತ, ಸಂಕಲನ, ಛಾಯಾಗ್ರಹಣ ಎಲ್ಲದರಲ್ಲಿಯೂ ಹೊಸತನವೇ ನಿಗಿ ನಿಗಿಸುವಂತೆ ಈ ಚಿತ್ರವನ್ನ ದೇವ್ ರೂಪಿಸಿದ್ದಾರೆ. ಹೊಸ ವರ್ಷದ ಆರಂಭದಲ್ಲಿಯೇ ಗಿಣಿ ಹೇಳೋ ಕಥೆ ಕೇಳುವ ಸೌಭಾಗ್ಯ ಪ್ರೇಕ್ಷಕರದ್ದಾಗಲಿದೆ.
https://www.facebook.com/publictv/videos/1499818953482880/
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv