ತನ್ನ ಶೀರ್ಷಿಕೆಯಲ್ಲೇ ಕುತೂಹಲ ಹುಟ್ಟುಹಾಕಿರುವ, ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಸರ್ಕಾರಿ ಶಾಲೆ- H8’ ಎಂಬ ಚಿತ್ರವೀಗ ಸಿದ್ಧವಾಗಿದೆ. ಸದ್ಯ ಬಿಗ್‌ಬಾಸ್ ಮನೆಯಲ್ಲಿರುವ ಗಿಲ್ಲಿ ನಟ (Gilli) ಪ್ರಮುಖ ಪಾತ್ರಲ್ಲಿ ನಟಿಸಿರುವ ಈ ಚಿತ್ರಕ್ಕೆ ಗುಣ ಹರಿಯಬ್ಬೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗಿರಿಚಂದ್ರ ಪ್ರೊಡಕ್ಷನ್ಸ್ ಮೂಲಕ ತೇಜಸ್ವಿನಿ ಎಸ್. ಅವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಇತ್ತೀಚೆಗೆ ಈ ಚಿತ್ರದ ನೂತನ ಪೋಸ್ಟರ್‌ನ್ನು ಗಿಲ್ಲಿ ಸ್ವಂತ ಊರಾದ ಮಳವಳ್ಳಿ (Malavalli) ತಾಲೂಕಿನ ದಡದಪುರದಲ್ಲಿರುವ ಗಿಲ್ಲಿ ನಟ ಓದಿದ ಸರ್ಕಾರಿ ಶಾಲೆಯಲ್ಲಿ ಆತನ ತಂದೆ, ತಾಯಿ ಬಿಡುಗಡೆ ಮಾಡಿದರು. ಆರಂಭದಲ್ಲಿ ಕುತೂಹಲ ಕೆರಳಿಸುತ್ತ ಸಾಗುವ ಈ ಚಿತ್ರದ ಕಥೆ ಒಂದು ವಿಗ್ರಹದ ಮೇಲೆ ನಿಂತಿರುತ್ತೆ. ಚಿತ್ರದ ಕಥೆ 4ಕಡೆ ಸಾಗುತ್ತದೆ. ಈ ಚಿತ್ರಕ್ಕೆ ಬೆಂಗಳೂರು, ಚಿತ್ರದುರ್ಗ, ಶಿರಾ, ಶಿವಮೊಗ್ಗ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ಚಿತ್ರದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಹಾಗೂ ಸೆನ್ಸಾರ್ ಪ್ರಕ್ರಿಯೆ ಕೂಡ ಮುಗಿದಿದೆ. 2026ರ ಫೆಬ್ರವರಿಯಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡಕ್ಕಿದೆ.ಇದನ್ನೂ ಓದಿ: ಗಿಲ್ಲಿಯನ್ನೇ ನಾಮಿನೇಟ್ ಮಾಡಿದ ‘ಕಾವು’; ತಾರಕಕ್ಕೇರಿದ ರಜತ್-ಧ್ರುವಂತ್ ಜಗಳ
ವಿಜೇತ್ ಮಂಜಯ್ಯ ಅವರ ಸಂಗೀತ ಸಂಯೋಜನೆಯ ಈ ಚಿತ್ರದಲ್ಲಿ 3 ಹಾಡುಗಳಿದ್ದು, ಹಾಸ್ಯನಟ ಶರಣ್ ಹಾಗೂ ಮೆಹಬೂಬ್ ಸಾಬ್ ಒಂದೊಂದು ಹಾಡನ್ನು ಹಾಡಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ರವಿ ರಾಮದುರ್ಗ ಹಾಗೂ ವೀನಸ್ ಮೂರ್ತಿ ಅವರ ಕ್ಯಾಮೆರಾ ವರ್ಕ್, ರವಿತೇಜ ಸಿ.ಹೆಚ್. ಅವರ ಸಂಕಲನ ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ಗಿಲ್ಲಿ ನಟ, ಗುಣ ಹರಿಯಬ್ಬೆ, ಮೇಘಶ್ರೀ ಪ್ರಮುಖ ಪಾತ್ರಗಳಲ್ಲಿದ್ದು, ಉಳಿದಂತ ರಾಘವೇಂದ್ರ ರಾವ್, ಕುಮಾರ್, ಸುಚೇಂದ್ರ ಪ್ರಸಾದ್, ಜಗಪ್ಪ, ನವಾಜ್, ಸುಶ್ಮಿತ ಜಗಪ್ಪ, ಕಡ್ಡಿಪುಡಿ, ಜೋತಿರಾಜ್, ನಮ್ರತಾ ನಟಿಸಿದ್ದಾರೆ.


