‘ಗಿಫ್ಟ್ ಬಾಕ್ಸ್’ ಹಾಡುಗಳು ಬಿಡುಗಡೆ

Public TV
2 Min Read
Gift Box 6 e1574177499878

‘ಗಿಫ್ಟ್ ಬಾಕ್ಸ್’ ಮಾನವ ಕಳ್ಳ ಸಾಗಾಣಿಕೆ ಮಾಡುವ ವ್ಯಕ್ತಿ ಹಾಗೂ ಲಾಕ್ಡ್ ಇನ್ ಸಿಂಡ್ರಮ್ ಎಂಬ ನರರೋಗ ಸಮಸ್ಯೆಯ ಕುರಿತಂತೆ ಕಥಾ ಹಂದರವುಳ್ಳ ಚಿತ್ರ. ರಘು ಎಸ್.ಪಿ. ಈ ಚಿತ್ರದ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗ ಮೈಸೂರಿನ ಒಂದಷ್ಟು ಸಮಾನ ಮನಸ್ಕರೆಲ್ಲ ಸೇರಿ ‘ಗಿಫ್ಟ್ ಬಾಕ್ಸ್’ ಎಂಬ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದ ಹಾಡುಗಳು ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭ ಶ್ರೀ ಚಾಮುಂಡೇಶ್ವರಿ ಸ್ಟುಡಿಯೋಸ್ ಆವರಣದಲ್ಲಿ ನೆರವೇರಿತು. ನಿವೃತ್ತ ಪೊಲೀಸ್ ಕಮೀಷನರ್ ಟಿ.ಲೋಕೇಶ್ವರ್, ಪತ್ರಕರ್ತ ಜಿ.ಎನ್.ಮೋಹನ್ ಹಾಗೂ ನಟ ಡಾಲಿ ಧನಂಜಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಗಿಫ್ಟ್ ಬಾಕ್ಸ್ ಹಾಡುಗಳನ್ನು ಬಿಡುಗಡೆಗೊಳಿಸಿದರು. 3 ವರ್ಷಗಳ ಹಿಂದೆ ‘ಪಲ್ಲಟ’ ಎಂಬ ಚಿತ್ರ ನಿರ್ಮಿಸಿ ರಘು ಅವರು ರಾಜ್ಯ ಪ್ರಶಸ್ತಿ ಕೂಡ ಗಳಿಸಿದ್ದರು. ಅಲ್ಲದೆ ಈ ಚಿತ್ರ ಹಲವು ಚಲನಚಿತ್ರೋತ್ಸವಗಳಲ್ಲಿ ಕೂಡ ಪ್ರದರ್ಶನ ಕಂಡಿತ್ತು.

Gift Box 5

ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ನಿರ್ದೇಶಕ ರಘು ಮುಖ್ಯವಾಗಿ 2 ಟಾಪಿಕ್ ಮೇಲೆ ಈ ಚಿತ್ರಕಥೆ ಸಾಗುತ್ತದೆ. ಹ್ಯೂಮನ್ ಟ್ರಾಪಿಕ್ (ಮಾನವ ಕಳ್ಳ ಸಾಗಾಣಿಕೆ) ಹಾಗೂ ಲಾಕ್ಡ್ ಇನ್ ಸಿಂಡ್ರೋಮ್ ಕಾಯಿಲೆ ಚಿತ್ರದ ಮುಖ್ಯ ಕಥಾವಸ್ತು. ಹ್ಯೂಮನ್ ಟ್ರಾಫಿಕ್ ಮೇಲೆ ಅನೇಕ ಸಿನಿಮಾಗಳು ಬಂದಿದ್ದರೂ ಅದರಲ್ಲಿ ಯಾರೂ ಟಚ್ ಮಾಡಿರದಂಥ ಒಂದು ವಿಷಯವನ್ನು ತೆಗೆದುಕೊಂಡು ಈ ಸಿನಿಮಾ ಮಾಡಿದ್ದೇನೆ. ಮುಗ್ಧ ಯುವಕನೊಬ್ಬ ತನಗರಿವಿಲ್ಲದಂತೆ ಈ ಮಾನವ ಕಳ್ಳ ಸಾಗಾಣಿಕೆದಾರರ ಜಾಲದಲ್ಲಿ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ನಂತರ ಆತನ ಮನಃಸ್ಥಿತಿ ಹೇಗಿರುತ್ತದೆ. ಆತ ತನ್ನ ಫ್ಯಾಮಿಲಿಯನ್ನು ಹೇಗೆ ಫೇಸ್ ಮಾಡಬೇಕಾಗುತ್ತದೆ. ಆ ಜಾಲದಿಂದ ಹೊರಬರಲು ಏನೆಲ್ಲಾ ಪ್ರಯತ್ನ ಮಾಡಿದ ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ. ಗಿಫ್ಟ್ ಬಾಕ್ಸ್ ಇಡೀ ಸಿನಿಮಾದ ಒಂದು ಭಾಗವಾಗಿ ಮೂಡಿಬರುತ್ತದೆ. 38 ದಿನಗಳ ಕಾಲ ಮೈಸೂರಿನ ಚಾಮುಂಡಿ ಬೆಟ್ಟದ ಬಳಿಯ ಹಳ್ಳಿಯೊಂದರಲ್ಲಿ ಶೂಟ್ ಮಾಡಿದ್ದೇವೆ. ಇಡೀ ಸಿನಿಮಾ ಸಿಂಕ್ ಸೌಂಡ್‍ನಲ್ಲಿ ಶೂಟ್ ಆಗಿದೆ. ಅದಕ್ಕೆ ತುಂಬಾ ಸಮಯ ಬೇಕಿರುತ್ತದೆ. ರಿತ್ವಿಕ್ ಮಠದ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಅಮಿತಾ ಕುಲಾಲ್ ಹಾಗೂ ದೀಪ್ತಿ ಮೋಹನ್ ನಾಯಕಿಯರು, ಮುರಳಿ ಗುಂಡಣ್ಣ, ಶಿವಾಜಿರಾವ್ ಜಾಧವ್ ಹಾಗೂ ಪ್ರೊ. ಲಕ್ಷ್ಮಿ ಚಂದ್ರಶೇಖರ್ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು.

Gift Box 3

ವಾಸು ದೀಕ್ಷಿತ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಅನನ್ಯಾ ಭಟ್, ಬಿಂದು ಮಾಲಿನಿ, ವಾಸು ದೀಕ್ಷಿತ್ ಹಾಡುಗಳಿಗೆ ದನಿಯಾಗಿದ್ದಾರೆ. ಹಳ್ಳಿ ಚಿತ್ರ ಬ್ಯಾನರ್ ಪರವಾಗಿ ಮಧು ದೀಕ್ಷಿತ್ ಮಾತನಾಡಿ, ಈ ಕಥೆಯನ್ನು ಓದಿದ ನಂತರವೂ ನಮ್ಮನ್ನು ಕಾಡುತ್ತದೆ. ಸಿನಿಮಾ ಕೂಡ ಅದ್ಭುತವಾಗಿ ಮೂಡಿಬಂದಿದೆ ಎಂದು ಹೇಳಿದರು.

ನಿವೃತ್ತ ಪೊಲಿಸ್ ಅಧಿಕಾರಿ ಪಿ.ಲೋಕೇಶ್ವರ್ ಮಾತನಾಡಿ, ಪ್ರತಿವರ್ಷ ನಮ್ಮ ದೇಶದಲ್ಲಿ ವರ್ಷಕ್ಕೆ ಲಕ್ಷಾಂತರ ಜನ ಮಿಸ್ಸಿಂಗ್ ಆಗುತ್ತಾರೆ. ಅದರಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯೇ ಜಾಸ್ತಿ. ಹುಟ್ಟಿದ ಅರ್ಧಗಂಟೆಯಲ್ಲೇ ಮಗು ಮಿಸ್ ಆಗುತ್ತದೆ. ಅಲ್ಲಿಂದಲೇ ಮಿಸ್ಸಿಂಗ್ ಪ್ರಕರಣ ಆರಂಭವಾಗುತ್ತದೆ. ಉತ್ತರ ಕರ್ನಾಟಕದ ಕಡೆ ಬಡತನದ ಕಾರಣದಿಂದ ಪೋಷಕರೇ ತಮ್ಮ ಮಕ್ಕಳನ್ನು ಕಳಿಸಿಕೊಡುತ್ತಾರೆ. ಅಂತಹವರೆಲ್ಲ ಸ್ಲೀಪಿಂಗ್ ಸೆಲ್ ಆಗಿ ಬದುಕುತ್ತಾರೆ. ರಘು ಇದನ್ನೆಲ್ಲಾ ಈ ಸಿನಿಮಾದಲ್ಲಿ ತೋರಿಸಿದ್ದಾರೆ ಎಂದುಕೊಂಡಿದ್ದೇನೆ. ಈ ಕುರಿತು ಜನ ಜಾಗೃತರಾಗಬೇಕು ಎಂದು ಹೇಳಿದರು.

ನಾನಿಲ್ಲಿ ಸ್ಟಾರ್ ಆಗಿ ಬಂದಿಲ್ಲ, ಒಬ್ಬ ಗೆಳೆಯನಾಗಿ ಶುಭ ಕೋರಲು ಬಂದಿದ್ದೇನೆ ಎಂದು ಡಾಲಿ ಧನಂಜಯ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *