‘ಗಿಚ್ಚಿ ಗಿಲಿಗಿಲಿ 3′ ಕಾರ್ಯಕ್ರಮ ವಿನ್ನರ್ ಆಗಿರುವ ಹುಲಿ ಕಾರ್ತಿಕ್ (Huli Karthik) ಅವರು ‘ಬಿಗ್ ಬಾಸ್ ಕನ್ನಡ 11’ಕ್ಕೆ (Bigg Boss Kannada 11) ಬರುತ್ತಾರಾ? ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ದೊಡ್ಮನೆ ಆಟದ ಕುರಿತು ಎದುರಾದ ಪ್ರಶ್ನೆಗೆ, ಅವಕಾಶ ಸಿಕ್ಕರೆ 100% ಬಿಗ್ ಬಾಸ್‌ಗೆ ಹೋಗುತ್ತೇನೆ ಎಂದು ನಟ ‘ಪಬ್ಲಿಕ್ ಟಿವಿ’ ಡಿಜಿಟಲ್‌ಗೆ ರಿಯಾಕ್ಟ್ ಮಾಡಿದ್ದಾರೆ.
ಬಿಗ್ ಬಾಸ್‌ಗೆ ಹೋಗ್ತೀನಿ ಅಂತ ನನ್ನ ಹೆಸರು ಓಡಾಡುತ್ತಿದೆ. ಆದರೆ ನಾನು ಓಡಾಡುತ್ತಿಲ್ಲ ಎಂದು ಕಾರ್ತಿಕ್ ತಮಾಷೆಯಾಗಿ ಉತ್ತರಿಸಿದ್ದಾರೆ. ನನ್ನ ಆತ್ಮೀಯರೆಲ್ಲಾ ಬಂದಿರುವ ಸುದ್ದಿ ಕಳಿಸೋದು, ನೀನು ಹೋಗ್ತಿದ್ದೀಯಾ ಆದರೆ ಹೇಳ್ತಿಲ್ಲ ಅಂತ. ಎಲ್ಲಾ ಸರಿ ಶೋಗೆ ಬರಲು ವಾಹಿನಿಯ ಕಡೆಯಿಂದ ನನಗೆ ಆಫರ್ ಬಂದಿಲ್ಲ ಎಂದು ಕಾರ್ತಿಕ್ ಮಾತನಾಡಿದ್ದಾರೆ.
ಇತ್ತೀಚೆಗೆ ಒಂದು ಘಟನೆ ನಡೆಯಿತು. ನಾನು ಸ್ವಲ್ಪ ದಪ್ಪ ಆಗಿದ್ದೆ, ಶರ್ಟ್‌ಗಳು ನನಗೆ ಆಗುತ್ತಿರಲಿಲ್ಲ. ಅದಕ್ಕೆ ನಾನು ಹೊಸ ಶರ್ಟ್ ಖರೀದಿಸಲು ಹೋಗಿದ್ದೆ, ಅದನ್ನು ನೋಡಿ ಅನೇಕರು ಬಿಗ್ ಬಾಸ್‌ಗೆ ಹೋಗ್ತಿದ್ದೀರಾ ಅಲ್ವಾ? ಎಂದರು. ಈ ಶೋ ಶುರು ಆಗುವವರೆಗೂ ನಾನು ಏನು ಖರೀದಿಸಲು ಸಾಧ್ಯವಿಲ್ಲ ಎಂದು ತಮಾಷೆಯಾಗಿ ಉತ್ತರಿಸಿದರು.
ವಾಹಿನಿ ಕಡೆಯಿಂದ ಆಫರ್ ಬಂದರೆ 100% ಬಿಗ್ ಬಾಸ್‌ಗೆ ಹೋಗುತ್ತೇನೆ. ನಾನು ಮನರಂಜನೆ ಕೊಡೋದಷ್ಟೇ ನನ್ನ ಜೀವನ. ಅದು ಬಿಗ್ ಬಾಸ್ ಆಗಿರಲಿ ಅಥವಾ ಯಾವುದೇ ರಿಯಾಲಿಟಿ ಶೋ ಆಗಿರಲಿ ನಟನಾಗಿ ಮನರಂಜನೆ ನೀಡುವುದು ನನ್ನ ಕರ್ತವ್ಯ ಎಂದಿದ್ದಾರೆ. ಈ ಮೂಲಕ ದೊಡ್ಮನೆಯಲ್ಲಿ ಆಡಲು ಅವಕಾಶ ಸಿಕ್ಕರೆ ಸದುಪಯೋಗಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಪ್ರಸ್ತುತ ವಾಹಿನಿ ಕಡೆಯಿಂದ ಕರೆ ಬಂದಿಲ್ಲ ಎಂದು ಮಾತನಾಡಿದ್ದಾರೆ.