ಹೈದರಬಾದ್: ಜೈಂಟ್ ವ್ಹೀಲ್ ಕುಸಿದು 10 ವರ್ಷದ ಬಾಲಕಿ ದುರ್ಮರಣಕ್ಕೀಡಾದ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮೃತ ದುರ್ದೈವಿ ಬಾಲಕಿಯನ್ನು ಅಮೃತ ಎಂದು ಗುರುತಿಸಲಾಗಿದೆ. ಈಕೆ ಅನಂತಪುರ ಕಾಲೇಜು ಮೈದಾನದಲ್ಲಿ ಆಯೋಜಿಸಲಾದ ಮೋಜು ಮೇಳ ಪ್ರದರ್ಶನಕ್ಕೆ ತೆರಳಿದ್ದಳು. ವೀಕೆಂಡ್ ಹಾಗೂ ಶಾಲೆಗೆ ರಜಾ ಸಮಯವಾಗಿದ್ದರಿಂದ ಪ್ರದರ್ಶನ ಜನಜಂಗುಳಿಯಿಂದ ಕೂಡಿತ್ತು. ಈ ವೇಳೆ ಅಮೃತ ಅಲ್ಲಿದ್ದ ಜೈಂಟ್ ವ್ಹೀಲ್ ನಲ್ಲಿ ಕುಳಿತಿದ್ದಾಳೆ.
ಜೈಂಟ್ ವ್ಹೀಲ್ ತಿರುಗುತ್ತಿದ್ದ ಸಂದರ್ಭದಲ್ಲಿ ಅದರ ಒಂದು ಟ್ರಾಲಿ ಕಾರ್ ನ ಬೋಲ್ಟ್ ಸಡಿಲವಾಗಿದೆ. ಪರಿಣಾಮ ಏಕಾಏಕಿ ಕುಸಿದುಬಿದ್ದಿದೆ. ಹೀಗಾಗಿ ಎತ್ತರದಿಂದ ಬಿದ್ದಿದ್ದರಿಂದ ಬಾಲಕಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾಳೆ. ಈ ಅಚ್ಚರಿ ಹಾಗೂ ಭಯಾನಕ ಘಟನೆಯಲ್ಲಿ ನೆರೆದಿದ್ದವರು ಕಣ್ಣಾರೆ ಕಂಡಿದ್ದಾರೆ.
ಘಟನೆಯಲ್ಲಿ ಮೂವರು ಮಕ್ಕಳು ಸೇರಿ 6ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ. ಘಟನೆಯಲ್ಲಿ ಗಾಯಗೊಂಡವರನ್ನು ಅನಂತಪುರ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜೈಂಟ್ ವ್ಹೀಲ್ ನ ಬೋಲ್ಟ್ ಸಡಿಲಗೊಂಡಿದ್ದನ್ನು ಗಮನಿಸಿದ ಕೂಡಲೇ ವ್ಹೀಲ್ ಆಪರೇಟರಿಗೆ ಮಾಹಿತಿ ರವಾನಿಸಿದ್ದಾರೆ. ಆದ್ರೆ ಆತ ಕುಡಿದ ಮತ್ತಿನಲ್ಲಿದ್ದರಿಂದ ತಕ್ಷಣವೇ ಸರಿಪಡಿಸಲು ಆಗಿಲ್ಲ. ಹೀಗಾಗಿ ಈ ದುರಂತ ಸಂಭವಿಸಿದೆ ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದುರಂತ ಸಂಭವಿಸಿದ ಕೂಡಲೇ ಸ್ಥಳೀಯರು ವ್ಹೀಲ್ ಆಪರೇಟರನ್ನು ಹಿಡಿದು ಚೆನ್ನಾಗಿ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.