ಬೆಂಗಳೂರು: ಬಿಜೆಪಿಯವರು ಲೋಕಸಭೆ, ರಾಜ್ಯಸಭೆ, ಶಾಸಕರು, ಕಾರ್ಪೋರೇಟರ್ ಗಳನ್ನು ತಮ್ಮ ಕಡೆ ಸೆಳೆಯುತ್ತಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವ ಮುಗಿಸುವ ಹುನ್ನಾರವನ್ನು ಹೊಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಗುಲಾಂ ನಬಿ ಅಜಾದ್ ಆರೋಪಿಸಿದ್ದಾರೆ.
ಕೆಕೆ ಗೆಸ್ಟ್ ಹೌಸ್ ಬಳಿ ಮಾತನಾಡಿದ ಅವರು, ಕೇಂದ್ರ ಬಿಜೆಪಿಯು ಕಳೆದ 5 ವರ್ಷಗಳಿಂದ ಒಂದೊಂದೇ ರಾಜ್ಯದಲ್ಲಿ ವಿಪಕ್ಷಗಳ ವಿರುದ್ಧ ಆಟವಾಡುತ್ತಿದೆ. ವಿರೋಧ ಪಕ್ಷವನ್ನು ಮುಗಿಸುವುದು ಬಿಜೆಪಿ ಪ್ಲ್ಯಾನ್. ಪ್ರಜಾಪ್ರಭುತ್ವ ಇವತ್ತು ಅರ್ಥ ಕಳೆದುಕೊಳ್ಳುವಂತೆ ಮಾಡುತ್ತಿದೆ. ಈ ಮೂಲಕ ದೇಶದಲ್ಲಿ ಬಿಜೆಪಿ ಬಿಟ್ಟು ಇನ್ಯಾವುದೇ ಪಕ್ಷ ಇರಬಾರದು ಎನ್ನುವುದು ಅವರ ವಿಚಾರವಾಗಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕೆಲ ಶಾಸಕರು ಸುಪ್ರೀಂಕೋರ್ಟಿಗೆ ಹೋಗಿದ್ದಾರೆ. ಸುಪ್ರೀಂಕೋರ್ಟ್ ಬಗ್ಗೆ ನಾನು ಏನು ಮಾತನಾಡುವುದಿಲ್ಲ. ಸ್ಪೀಕರ್ ನಿರ್ಧಾರ ಅಂತಿಮ. ಎಲ್ಲರಿಗೂ ಸ್ಪೀಕರ್ ನ್ಯಾಯ ಕೊಡುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದ ವಿದ್ಯಾಮಾನವನ್ನು ದೇಶದ ಜನ ನೋಡುತ್ತಿದ್ದಾರೆ. ಈ ಬಗ್ಗೆ ರಾಜ್ಯ ನಾಯಕರ ಜೊತೆ ಮಾತಾಡಿದ್ದೇನೆ. ಮುಂದೆ ಏನಾಗುತ್ತದೆ ಅಂತ ನೋಡಬೇಕಿದೆ ಎಂದು ಹೇಳಿದರು.