ಲಕ್ನೋ: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಘಜಿಯಾಬಾದ್‍ನ ಮುರಾದ್ ನಗರದಲ್ಲಿ ನಡೆದಿದೆ.
ಮೃತ ತಾಯಿಯನ್ನು ಮುರಾದ್ ನಗರದ ಪ್ರೀತ್ ವಿಹಾರ್ ಕಾಲೋನಿ ನಿವಾಸಿ 32 ವರ್ಷದ ದೀಪಾ ಎಂದು ಗುರುತಿಸಲಾಗಿದೆ. ದೀಪಾ ಮಕ್ಕಳಾದ 8 ವರ್ಷದ ರೀನಾ ಮತ್ತು 5 ವರ್ಷದ ಗಂಡು ಮಗು ಲಲಿತ್ ಮೇಲೂ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದ ಮೂವರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿದ್ದು, ತಾಯಿ ದೀಪಾ ಮತ್ತು ಮಗಳು ರೀನಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಮಗ ಲಲಿತ್ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿ ನರೇಶ್ ಕುಮಾರ್ ಜಾಡಾನ್ ತಿಳಿಸಿದ್ದಾರೆ.
ಈ ಘಟನೆಯ ಬಗ್ಗೆ ಮಾತನಾಡಿರುವ ನರೇಶ್ ಕುಮಾರ್, ಘಟನಾ ಸ್ಥಳದಲ್ಲಿ ಸಂಪೂರ್ಣ ಅವ್ಯವಸ್ಥೆ ಇದೆ. ಈ ಪ್ರಕರಣವು ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತೋರುತ್ತದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.