– 20 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, ವಿದೇಶಿ ಕರೆನ್ಸಿ ಪತ್ತೆ
ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸುಪ್ರಸಿದ್ಧ ಐತಿಹಾಸಿಕ ಸುಬ್ರಹ್ಮಣ್ಯೇಶ್ವರ ದೇವಾಲಯದ ಹುಂಡಿ ಎಣಿಕೆ ಕಾರ್ಯ ನೆರವೇರಿತು.
ಕಳೆದ ಒಂದು ತಿಂಗಳಿನ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಬರೋಬ್ಬರಿ 51,76,196 ರೂ. ಸಂಗ್ರಹವಾಗಿದೆ. ಹುಂಡಿ ಎಣಿಕೆ ವೇಳೆ ಅಮಾನ್ಯ ಮಾಡಲಾದ ನಿಷೇಧಿತ 500 ರೂ. ಮುಖಬೆಲೆಯ 11 ನೋಟುಗಳು ಹಾಗೂ 1000 ರೂ. ಮುಖಬೆಲೆಯ 18 ನೋಟುಗಳು ಪತ್ತೆಯಾಗಿವೆ. ಇದಲ್ಲದೆ ವಿದೇಶಿ ಕರೆನ್ಸಿ ಸಂಗ್ರಹವಾಗಿದ್ದು, ಅಮೆರಿಕನ್ ಡಾಲರ್‌ಗಳು ಸೇರಿದಂತೆ ಇಂಡೋನೇಷಿಯಾ ಹಾಗೂ ಸಿಂಗಪುರ್ ಕರೆನ್ಸಿಗಳು ಸಹ ಸಿಕ್ಕಿವೆ.
Advertisement
Advertisement
ಹುಂಡಿಯಲ್ಲಿ 20 ಗ್ರಾಂ ಚಿನ್ನಾಭರಣ, 46,500 ರೂಪಾಯಿ ಬೆಲೆಯ 2 ಕೆಜಿ 200 ಗ್ರಾಂ ಬೆಳ್ಳಿ ಸಹ ಸಂಗ್ರಹವಾಗಿದೆ. ಈ ತಿಂಗಳಲ್ಲಿ ದಾಖಲೆಯ ಹಣ ಸಂಗ್ರಹವಾಗಿದೆ. ಕಳೆದ ವರ್ಷ ನವೆಂಬರ್ 29ರಂದು ಹುಂಡಿ ಎಣಿಕೆ ಕಾರ್ಯ ನಡೆಸಿದ್ದು ಅಂದು 39 ಲಕ್ಷದ 12 ಸಾವಿರದ 57 ರೂ. ಸಂಗ್ರಹವಾಗಿತ್ತು. ಇದಲ್ಲದೆ 1 ಗ್ರಾಂ 400 ಮಿಲಿ ಚಿನ್ನ ಹಾಗೂ ಬೆಳ್ಳಿ ಕೂಡ ಸಂಗ್ರಹವಾಗಿತ್ತು. ಹೀಗಾಗಿ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಹಣ ಸಂಗ್ರಹವಾಗಿದೆ.
Advertisement
ಅಂದಹಾಗೆ ಜನವರಿ 1 ರಂದು ಸುಬ್ರಹ್ಮಣ್ಯೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ಜರುಗಿದೆ. ಈ ಜಾತ್ರೆಗೆ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದಿದ್ದರು. ಹೀಗಾಗಿ ಈ ಬಾರಿ ದಾಖಲೆಯ ಮೊತ್ತ ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ತಿಳಿಸಿದರು.