– ಕ್ರಿಮಿನಲ್ ಹಿನ್ನೆಲೆ – ವೀಸಾ ನೀಡಲು ನಕಾರ
– ಏರ್‌ಪೋರ್ಟ್‌ನಲ್ಲೇ ಊಟ, ನಿದ್ರೆ
ನವದೆಹಲಿ: ಕೊರೊನಾ ವೈರಸ್ ಹಾವಳಿ ನಿಯಂತ್ರಣಕ್ಕೆ ಲಾಕ್‍ಡೌನ್ ಜಾರಿಯಾದ ಹಿನ್ನೆಲೆ ಜರ್ಮನಿಯ ವಾಂಟೆಡ್ ಕ್ರಿಮಿನಲ್ ಒಬ್ಬ ಕಳೆದ 54 ದಿನಗಳಿಂದ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದಾನೆ.
ವಿಮಾನ ನಿಲ್ದಾಣದ ಅಂತರಾಷ್ಟ್ರೀಯ ಟರ್ಮಿನಲ್‍ನ ಟ್ರಾನ್ಸಿಟ್ ಏರಿಯಾದಲ್ಲಿ ಜರ್ಮನಿಯ ಎಡ್ಗಾರ್ಡ್ ಜೇಬತ್(40) ಕಳೆದ 54 ದಿನಗಳಿಂದ ತಂಗಿದ್ದಾನೆ. ಮಾರ್ಚ್ 18ರಂದು ವಿಯೇಟ್ನಾಂನಿಂದ ದೆಹಲಿಗೆ ವಿಯೇಟ್ ಜೆಟ್ ವಿಮಾನದಲ್ಲಿ ಬಂದಿದ್ದನು. ಇಲ್ಲಿಂದ ಟರ್ಕಿಯ ಇಸ್ತಾಂಬುಲ್‍ಗೆ ಈತ ತೆರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದನು. ಆದರೆ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆ ಭಾರತದಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು. ಬಳಿಕ ಮಾರ್ಚ್ 25ರಿಂದ ದೇಶಾದ್ಯಂತ ಲಾಕ್‍ಡೌನ್ ಜಾರಿಗೊಳಿಸಲಾಯಿತು.
ಈ ಹಿನ್ನೆಲೆ ಜೇಬತ್ ಸೇರಿದಂತೆ 5 ಮಂದಿ ಪ್ರಯಾಣಿಕರು ದೆಹಲಿ ವಿಮಾನ ನಿಲ್ದಾಣದಲ್ಲೇ ಸಿಲುಕಿ ಹಾಕಿಕೊಂಡಿದ್ದರು. ಶ್ರೀಲಂಕಾದ ಇಬ್ಬರು, ಮಾಲ್ಡೀವ್ಸ್ ನ ಒಬ್ಬರು, ಫಿಲಿಪೈನ್ಸ್ ಮೂಲದ ಒಬ್ಬರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಇರುವಂತಾಯಿತು. ತಕ್ಷಣ ವಿಮಾಣ ನಿಲ್ದಾಣದ ಅಧಿಕಾರಿಗಳು ಸಂಬಂಧಪಟ್ಟ ದೇಶದ ರಾಯಭಾರಿ ಕಚೇರಿಗೆ ಸಂಪರ್ಕಿಸಿ ಪ್ರಯಾಣಿಕರು ಅವರ ರಾಷ್ಟ್ರಕ್ಕೆ ವಾಪಸ್ ಹೋಗಲು ಸಹಕರಿಸಿದರು. ಆದರೆ ಜೇಬತ್ ವಿಚಾರವನ್ನು ಜರ್ಮನಿ ರಾಯಭಾರಿ ಕಚೇರಿಗೆ ತಿಳಿಸಿದಾಗ, ಆತ ಜರ್ಮನಿಯ ವಾಟೆಂಡ್ ಕ್ರಿಮಿನಲ್ ಎಂಬುದು ಬೆಳಕಿಗೆ ಬಂದಿದೆ. ಅಲ್ಲದೇ ಆತನ ಮೇಲೆ ಸಾಕಷ್ಟು ಪ್ರಕರಣಗಳು ಇವೆ ಎಂಬುದು ತಿಳಿದ ಹಿನ್ನೆಲೆ ಭಾರತದ ವೀಸಾವನ್ನು ನೀಡಲು ನಿರಾಕರಿಸಲಾಯಿತು.
ಹೀಗಾಗಿ ಟ್ರಾನ್ಸಿಟ್ ಏರಿಯಾದಲ್ಲಿಯೇ ಜೇಬತ್ ಕಳೆದ 54 ದಿನಗಳಿಂದ ತಂಗಿದ್ದಾನೆ. ಬೇರೆ ರಾಷ್ಟ್ರದ ಪ್ರಜೆಯನ್ನು ಬಂಧಿಸಲು ಅವಕಾಶವಿಲ್ಲದ ಹಿನ್ನೆಲೆ ದೆಹಲಿ ಪೊಲೀಸರು ಆತನನ್ನು ವಶಕ್ಕೆ ಪಡೆದಿಲ್ಲ. ಲಾಕ್‍ಡೌನ್ ಜಾರಿಯಲ್ಲಿದ್ದ ಹಿನ್ನೆಲೆ ಆತನನ್ನು ಬೇರೆ ಕಡೆಗೆ ಸ್ಥಳಾಂತರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆತ ಟ್ರಾನ್ಸಿಟ್ ಏರಿಯಾದಲ್ಲಿಯೇ ತಂಗಿದ್ದಾನೆ. ಟ್ರಾನ್ಸಿಟ್ ಏರಿಯಾದಲ್ಲಿ ಆತ ಒಬ್ಬನೇ ಇರುವುದರಿಂದ ಆತನಿಗೆ ಅಲ್ಲಿಯೇ ಇರಲು ಅವಕಾಶ ನೀಡಲಾಗಿದೆ. ನಿಯಮಗಳ ಪ್ರಕಾರ ಪ್ರಯಾಣಿಕರಿಗೆ ಒಂದು ದಿನ ಮಾತ್ರ ಟ್ರಾನ್ಸಿಟ್ ಏರಿಯಾದಲ್ಲಿ ತಂಗಲು ಅವಕಾಶ ಇರುತ್ತದೆ. ಆದರೆ ಅನಿವಾರ್ಯ ಕಾರಣಗಳಿಂದ ಜೇಬತ್‍ಗೆ ವಿಮಾನ ನಿಲ್ದಾಣದಲ್ಲಿಯೇ ತಂಗಲು ಅವಕಾಶ ನೀಡಲಾಗಿದೆ.
ಕಾರ್ಗೋ ವಿಮಾನಗಳು ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆ ವಿಮಾನ ನಿಲ್ದಾಣದಲ್ಲಿ ಕೆಲ ಆಹಾರ ಅಂಗಡಿಗಳು, ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿವೆ. ಹೀಗಾಗಿ ಅಲ್ಲಿ ಸಿಗುವ ಆಹಾರ ಸೇವಿಸಿಕೊಂಡು, ವಿಮಾನ ನಿಲ್ದಾಣದ ಶೌಚಾಲಯ ಬಳಸಿಕೊಂದು, ಟ್ರಾನ್ಸಿಟ್ ಏರಿಯಾದಲ್ಲಿಯೇ ಜೇಬತ್ ಇದ್ದಾನೆ. ಅಲ್ಲದೇ ಆಗಾಗ ವಿಮಾನ ನಿಲ್ದಾಣದ ಸಿಬ್ಬಂದಿ, ಅಧಿಕಾರಿಗಳು ಆತನ ಆರೋಗ್ಯ ವಿಚಾರಿಕೊಳ್ಳುತ್ತಿದ್ದು, ಆಹಾರ ಹಾಗೂ ಅಗತ್ಯ ವಸ್ತುಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಅಂತರಾಷ್ಟ್ರೀಯ ವಿಮಾಗಳು ರದ್ದುಗೊಂಡಿರುವ ಕಾರಣಕ್ಕೆ ಜೇಬತ್‍ನನ್ನು ಆತನ ರಾಷ್ಟ್ರಕ್ಕೆ ಕಳುಹಿಸಲು ಆಗುತ್ತಿಲ್ಲ. ಆದರೆ ಆತನ ಬಳಿ ಹಲವು ರಾಷ್ಟ್ರಗಳ ವೀಸಾಗಳು ಇವೆ. ಹೀಗಾಗಿ ಒಮ್ಮೆ ವಿಮಾನ ಹಾರಾಟ ಆರಂಭವಾದರೆ ಆತನನ್ನು ಆತನ ರಾಷ್ಟ್ರಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.