– 10 ವರ್ಷಗಳಿಂದ ತಾಯಿಗಾಗಿ ಹುಡುಕಾಟ
ರಾಯಚೂರು: ಕರಳು ಸಂಬಂಧ ಅದರಲ್ಲೂ ತಾಯಿ ಮಗಳ ಸಂಬಂಧ ಅಷ್ಟು ಸುಲಭಕ್ಕೆ ಒಂದೇ ಮಾತಿನಲ್ಲಿ ಹೇಳಿ ಮುಗಿಸುವಂತದ್ದಲ್ಲ. ಹೌದು ಎಲ್ಲಿಯ ಜರ್ಮನ್ ಎಲ್ಲಿಯ ರಾಯಚೂರು. ಜರ್ಮನ್ ಮಹಿಳೆಯೊಬ್ಬರು ಭಾರತದ ತಾಯಿಯನ್ನ ಕಳೆದ 10 ವರ್ಷಗಳಿಂದ ಹುಡುಕುತ್ತಿದ್ದಾರೆ.
‘ಭಾರತದಲ್ಲಿ ಮಹಿಳೆಯರು’ ಎನ್ನುವ ವಿಷಯದ ಮೇಲೆ ಸಂಶೋಧನೆ ಮಾಡಿ ಪಿಎಚ್‍ಡಿ ಪಡೆದಿರುವ ಜರ್ಮನ್ ದೇಶದ ಡಾ.ಮರಿಯಾ ಛಾಯ ಸೂಪ್ ತಮ್ಮ ತಾಯಿ ಗಿರಿಜಾ ಗಾಣಿಗರನ್ನ ಹುಡುಕುತ್ತಲೇ ಇದ್ದಾರೆ. ಆದರೆ ತಾಯಿ ಎಲ್ಲಿದ್ದಾಳೆ ಎನ್ನುವ ಸುಳಿವು ಮಾತ್ರ ಸಿಕ್ಕಿಲ್ಲ.
ಮಂಗಳೂರಿನ ಉಲ್ಲಾಳದಲ್ಲಿ ಮರಿಯಾ ಹುಟ್ಟಿದ್ದಾರೆ. ಆದರೆ ಬಡತನ ಕಾರಣದಿಂದ ತಾಯಿ ಗಿರಿಜಾ ಅವರು ಮಾರಿಯಾ 6 ವರ್ಷದವರಿದ್ದಾಗಲೇ 1981ರಲ್ಲಿ ಜರ್ಮನ್ ದಂಪತಿಗಳಿಗೆ ದತ್ತು ನೀಡಿದ್ದರು. ಉಲ್ಲಾಳ ಕಾನ್ವೆಂಟ್‍ನಲ್ಲಿ ಓದುತ್ತಿದ್ದ ಮಗಳ ಉತ್ತಮ ಭವಿಷ್ಯಕ್ಕಾಗಿ ಮಗಳನ್ನು ತಾಯಿ ದೂರ ಮಾಡಿಕೊಂಡಿದ್ದರು. ಜರ್ಮನ್‍ನಲ್ಲಿ ಚೆನ್ನಾಗಿ ಓದಿ ಶಿಕ್ಷಕಿಯಾಗಿರುವ ಮರಿಯಾ ಛಾಯಾ ಈಗ ತನ್ನ ತಾಯಿಯನ್ನ ನೋಡುವ ಹಂಬಲದಿಂದ ಹುಡುಕಾಟ ನಡೆಸಿದ್ದಾರೆ.
ಮಂಗಳೂರಿನಲ್ಲಿ ತಾಯಿಯ ಕೆಲವು ಸಂಬಂಧಿಕರು ಇದ್ದರೂ ಯಾರಿಗೂ ಗಿರಿಜಾ ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲ. ದತ್ತು ನೀಡಲು ಸಹಾಯ ಮಾಡಿದ ಉಲ್ಲಾಳದ ನಿರ್ಮಲಾ ವೆಲ್ ಫೆರ್ ಸೆಂಟರ್ ನಲ್ಲೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ತಾಯಿಯನ್ನು ಹುಡುಕಲು ಸಹಾಯ ಕೇಳಿ ನ್ಯಾಯಾಲಯ, ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿರುವ ಮರಿಯಾ ಹುಡುಕಾಟವನ್ನು ಮುಂದುವರಿಸಿದ್ದಾರೆ. ಊರು ಊರುಗಳನ್ನು ಅಲೆದು ಈಗ ರಾಯಚೂರಿಗೆ ಬಂದಿದ್ದಾರೆ.
ತಾಯಿಯ ಪರಿಚಯಸ್ಥರೊಬ್ಬರು ಗಿರಿಜಾ ಈ ಹಿಂದೆಯೇ ರಾಯಚೂರಿಗೆ ಹೋಗಿದ್ದಾರೆ ಎಂದು ಹೇಳಿದ್ದರಂತೆ. ಹೀಗಾಗಿ ಈಗ ಮರಿಯಾ ರಾಯಚೂರಿನಲ್ಲಿ ಹುಡುಕಾಟ ನಡೆಸಿದ್ದಾರೆ. ಕನಿಷ್ಠ ಮಾಧ್ಯಮಗಳ ಮೂಲಕವಾದರೂ ತಾಯಿ ಸಿಗಬಹುದು ಅಂತ ನಂಬಿಕೆಯಿಟ್ಟುಕೊಂಡಿದ್ದಾರೆ. ತಾಯಿಯಿಂದ ಆರು ವರ್ಷದವರಿದ್ದಾಗಲೇ ದೂರವಾದರೂ ನೆನಪಿನ ಶಕ್ತಿಯಿಂದ ಗಿರಿಜಾ ಅವರ ಚಿತ್ರ ಬರೆಯಿಸಿ ಹುಡುಕಾಟ ನಡೆಸಿದ್ದಾರೆ. ಸಂಬಂಧಿಕರೊಬ್ಬರಿಂದ ಹಳೆಯ ಫೋಟೋವೂ ಸಿಕ್ಕಿದ್ದು, ಮುಂದೆ ತಾಯಿಯೂ ಸಿಗಬಹುದು ಅಂತ ಮಗಳು ನಂಬಿದ್ದಾರೆ.
ಯಾವುದೋ ಸಿನಿಮಾ ಕತೆಯಂತೆ ಕಂಡರೂ ಇದು ಕತೆಯಲ್ಲಾ ಖಂಡಿತ ಜೀವನ. ಮರಿಯಾ ಅವರಿಗೆ ತಂದೆಯ ಬಗ್ಗೆ ಯಾವುದೇ ಮಾಹಿತಿಯಿಲ್ಲ. ತಾಯಿಯ ಕಷ್ಟ ಅರಿಯುವುದರೊಳಗೆ ಇನ್ನೊಬ್ಬರ ಮಡಿಲು ಸೇರಿದ್ದ ಮಗಳು ಈಗ ಹೆತ್ತಕರುಳನ್ನು ಹುಡುಕುತ್ತಿದೆ.