ನವದೆಹಲಿ: ಜೆನೆರಿಕ್ ಔಷಧಿಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದ ಬಳಿಕ ಈವರೆಗೆ ಜನಸಾಮಾನ್ಯರಿಗೆ ಬರೋಬ್ಬರಿ 2 ಸಾವಿರ ಕೋಟಿ ರೂ. ಉಳಿತಾಯವಾಗಿದೆ ಎಂದು ಮಂಗಳವಾರದಂದು ಸರ್ಕಾರ ತಿಳಿಸಿದೆ.
ಈ ಬಗ್ಗೆ ಮಾತನಾಡಿದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು, ಬ್ರಾಂಡ್ ಅಥವಾ ಜೆನೆರಿಕ್ ಗುಂಪಿಗೆ ಸೇರುವ ನಿಗದಿತ ಔಷಧಿಗಳ ಎಲ್ಲಾ ತಯಾರಕರು ತಮ್ಮ ಉತ್ಪನ್ನಗಳನ್ನು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‍ಪಿಪಿಎ) ನಿಗದಿಪಡಿಸಿದ ಸೀಲಿಂಗ್ ಬೆಲೆಯಲ್ಲಿ ಮಾರಾಟ ಮಾಡಬೇಕಾಗುತ್ತದೆ. ಇದರೊಂದಿಗೆ ಸ್ಥಳೀಯ ತೆರಿಗೆಗಳು ಕೂಡ ಔಷಧಿಗಳ ಮೇಲೆ ಅನ್ವಯವಾಗುತ್ತವೆ ಎಂದು ತಿಳಿಸಿದರು.
Advertisement
Advertisement
ಸರ್ಕಾರ ಹೃದಯ ಸಂಬಂಧಿ ಕಾಯಿಲೆಗಳಿಗೆ ಉಪಯುಕ್ತವಾಗುವ 1000 ಔಷಧಗಳ ಬೆಲೆ ಕಡಿತಗೊಳಿಸಿ ನಿರ್ದಿಷ್ಟ ದರ ನಿಗದಿಪಡಿಸಿದೆ. ಇದರಿಂದ ಜನೌಷಧ ಮಳಿಗೆಗಳಲ್ಲಿ ಸಿಗುವ ಜೆನೆರಿಕ್ ಔಷಧಗಳಿಂದ ಜನರಿಗೆ 2 ಸಾವಿರ ಕೋಟಿ ರೂಪಾಯಿಯಷ್ಟು ಉಳಿತಾಯವಾಗಿದೆ. ಅಲ್ಲದೆ ಈ ಸಂಬಂಧ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಮನ್ಸುಕ್ ಮಾಂಡವಿಯ ಅವರು ಲೋಕಸಭೆಯಲ್ಲಿ ಪ್ರಶ್ನಾವಳಿ ವೇಳೆ ಮಾಹಿತಿ ನೀಡಿದರು.
Advertisement
Advertisement
ಪ್ರಧಾನಮಂತ್ರಿ ಜನೌಷಧ ಮಳಿಗೆಗಳಲ್ಲಿ ಜೆನೆರಿಕ್ ಔಷಧಿಗಳು ಇತರೇ ಬ್ರಾಂಡ್ ಔಷಧಿಗಳಿಂತ 50-90ಶೇ. ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಹೀಗಾಗಿ ಸರ್ಕಾರ ಪ್ರಧಾನಮಂತ್ರಿ ಜನೌಷಧ ಮಳಿಗೆಗಳಲ್ಲಿ ಇವುಗಳನ್ನು ಹೆಚ್ಚು ಮಾಡಲು ಯೋಚಿಸುತ್ತಿದೆ. ಇದರಿಂದ ಇನ್ನೂ ಅನೇಕ ಜನರಿಗೆ ಸಹಾಯವಾಗುತ್ತದೆ ಎಂದರು.
ಅಲ್ಲದೆ ಕಳೆದ 5 ವರ್ಷಗಳಲ್ಲಿ ಸುಮಾರು 5, 028 ಪ್ರಧಾನಮಂತ್ರಿ ಜನೌಷಧ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನ(ಪಿಎಂಬಿಜೆಪಿ)ಯ ಉತ್ಪನ್ನ ಪಟ್ಟಿಯಲ್ಲಿ 900 ಔಷಧಿಗಳು ಮತ್ತು 154 ಶಸ್ತ್ರಚಿಕಿತ್ಸೆಗೆ ಬಳಕೆಯಾಗುವ ವಸ್ತುಗಳು ಒಳಗೊಂಡಿದೆ. ಅವುಗಳಲ್ಲಿ 714 ಔಷಧಿಗಳು ಮತ್ತು 53 ಶಸ್ತ್ರಚಿಕಿತ್ಸೆಗೆ ಬಳಸುವ ವಸ್ತುಗಳು ಜನೌಷಧ ಮಳಿಗೆಗಳಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಸಚಿವರು ಹೇಳಿದರು.