– ಕಸದ ವಾಹನಗಳೇ ಬರೋದಿಲ್ಲ, ನಾವು ಎಲ್ಲಿ ಸುರಿಯೋದು: ಮನೆ ಮುಂದೆ ಕಸ ಇಟ್ಟುಕೊಂಡು ಜನರ ಪ್ರಶ್ನೆ
ಬೆಂಗಳೂರು: ರಸ್ತೆಯಲ್ಲಿ ಬೇಕಾಬಿಟ್ಟಿ ಕಸ ಎಸೆಯುವವರ ಮನೆ ಮುಂದೆಯೇ ‘ಕಸ ಸುರಿಸುವ ಹಬ್ಬ’ ಅಭಿಯಾನ ನಡೆಸುತ್ತಿರುವ ಜಿಬಿಎ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ‘ಒಂದು ವಾರ ಆಯ್ತು, ನಮ್ಮ ಏರಿಯಾಗೆ ಕಸದ ಗಾಡಿಯೇ ಬಂದಿಲ್ಲ. ನಾವು ಕಸ ಎಲ್ಲಿ ಹಾಕುವುದು’ ಅಂತ ಕಿಡಿಕಾರಿದ್ದಾರೆ.

’15 ದಿನ ಆಯ್ತು. ಕಸದ ಗಾಡಿಯೇ ಬಂದಿಲ್ಲ. ನಾವೆಲ್ಲಿ ಕಸ ಹಾಕಬೇಕು. ಕಸ ಎತ್ತೋಕೂ ಕಾಸು ಕೇಳ್ತಾರೆ’ ಎಂದು ಲಗ್ಗೆರೆಯ ನಿವಾಸಿಗಳು ತಮ್ಮ ಮನೆಗಳ ಮುಂದೆಯೇ ಡಬ್ಬಿಗಳಲ್ಲಿ ಕಸ ಇಟ್ಟುಕೊಂಡು ಅಸಮಾಧಾನ ಹೊರಹಾಕಿದ್ದಾರೆ. ‘ಅಧಿಕಾರಿಗಳು ಬರಲಿ. ಅವರ ತಲೆಯ ಮೇಲೆಯೇ ಕಸ ಸುರಿಯುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಎಲ್ಲೆಂದರಲ್ಲಿ ಕಸ ಬಿಸಾಡೋರಿಗೆ ಜಿಬಿಎ ಪಾಠ: ಮನೆಮುಂದೆಯೇ ಕಸ ಸುರಿದು 2,000 ರೂ. ದಂಡ

ನಗರದ ಪ್ರಮುಖ ಬ್ಯುಸಿನೆಸ್ ಹಬ್‌ನಲ್ಲಿ ಕಸದ ಗಾಡಿಗಳೇ ಬರಲ್ಲ ಎಂಬ ಆರೋಪ ಜನರಿಂದ ಕೇಳಿಬಂದಿದೆ. ಮಾರ್ಷಲ್‌ಗಳಿಗೆ ಹೇಳಿದರೂ ಸಮಸ್ಯೆ ಬಗೆಹರಿಯಲ್ಲ. ಜನರಿಗೆ ಅರಿವು ಮೂಡಿಸುವ ಮೊದಲು ನೀವು ಸರಿಯಾಗಿ ಎಂದು ಜಿಬಿಎ ಅಧಿಕಾರಿಗಳನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
ಚಿಕ್ಕಪೇಟೆ, ಅವೆನ್ಯೂ ರಸ್ತೆ, ಕಬ್ಬನ್‌ಪೇಟೆಯಲ್ಲಿ ಕಸದ ಸಮಸ್ಯೆ ಇದೆ. ಕಸದ ವಾಹನಗಳು ಬರೋದೇ ಇಲ್ಲ. ಜನ ಕಸ ಹಾಕ್ತಾರೆ ಅಂತ ಮನೆ ಮುಂದೆ ಕಸ ಸುರಿಯುತ್ತೀರಿ. ಕಸದ ವಾಹನಗಳೇ ಬರಲ್ಲ ಅಂದ್ರೇ ಏನ್ ಮಾಡೋದು? ಜಿಬಿಎ ಕಚೇರಿ ಮುಂದೆ ಕಸ ಸುರಿದ್ರೇ ಒಪ್ತೀರಾ? ಕಸದ ವಾಹನ ಕಳಿಸಲ್ಲ ಅಂದ್ರೆ ಜಿಬಿಎ ಅಧಿಕಾರಿಗಳ ಮನೆ ಮುಂದೆ ಹಾಕ್ತೀವಿ. ಕೆಲವು ಕಡೆ ಕಸದ ವಾಹನ ಬರೋದು ಗೊತ್ತೇ ಆಗಲ್ಲ. ಕಸ ವಿಲೇವಾರಿ ಮಾಡಿಲ್ಲ ಅಂದ್ರೆ ಕಸವನ್ನ ಮನೆಯಲ್ಲಿ ಇಟ್ಕೋಬೇಕಾ? ನೀವು ವ್ಯವಸ್ಥೆ ಮಾಡಿಲ್ಲ ಅಂದ್ರೆ ಕಸ ಎಲ್ಲಿ ಹಾಕೋದು. ಮೊದಲು ವ್ಯವಸ್ಥೆ ಸರಿ ಮಾಡಿ ಎಂದು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಎದುರಿನ ರಸ್ತೆಯಲ್ಲೂ ಕಸದ ರಾಶಿ ಇದೆ. ಡಿಸಿ ಆಫೀಸ್ ಎದುರಿನ ಬನ್ನಪ್ಪ ಪಾರ್ಕ್ ರಸ್ತೆಯಲ್ಲಿ ಕಸದ ಗುಡ್ಡೆಯೇ ಇದೆ. ಒಂದಲ್ಲ ಎರಡಲ್ಲ ಮೂರು ಲೋಡ್ ಕಸವಿದೆ. ಅರ್ಧ ರಸ್ತೆ ಪೂರ್ತಿ ಕಸದ ರಾಶಿ ತುಂಬಿದೆ. ಇದರ ಮಧ್ಯೆಯೇ ಜನರು ಸಂಚಾರ ಮಾಡುವಂತಹ ಪರಿಸ್ಥಿತಿ ಇದೆ. ಕಸದ ವಾಸನೆಗೆ ಅಕ್ಕಪಕ್ಕದ ಮನೆಯವರು ಸಮಸ್ಯೆ ಎದುರಿಸುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ರಸ್ತೆಗೆ ಕಸ ಸುರಿಯುತ್ತಿದ್ದಾಗಲೇ ಸಿಕ್ಕಿಬಿದ್ದ ಯುವಕನ ಬೈಕ್ ಸೀಜ್!
 


 
		 
		 
		 
		 
		
 
		 
		 
		 
		