ಯಾದಗಿರಿ: ಪ್ರಕೃತಿ ತನ್ನಲ್ಲಿರುವ ವೈಶಿಷ್ಟ್ಯತೆಯ ಗುಟ್ಟನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ ಎನ್ನುವುದಕ್ಕೆ ಯಾದಗಿರಿ ಜಿಲ್ಲೆಯೇ ಸಾಕ್ಷಿ. ಸುಡುಬಿಸಿಲಿಗೆ ಮೈ ಒಡ್ಡಿ ನಿಂತ ಬೃಹತ್ ಕಲ್ಲುಬಂಡೆಗಳು ಒಂದು ಕಡೆಯಾದರೆ, ಮಲೆನಾಡಿನ ಚೆಂದಕ್ಕೆ ಸ್ಪರ್ಧೆಯೊಡ್ಡುವ ನಿಸರ್ಗದ ಐಸಿರಿ ಮತ್ತೊಂದೆಡೆ. ಇಲ್ಲಿರುವ ಹಚ್ಚ ಹಸಿರು ನಿಸರ್ಗ ಪ್ರೇಮಿಗಳನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದ್ದರೆ, ಎಲ್ಲಾ ಋತುವಿನಲ್ಲೂ ಧುಮ್ಮಿಕ್ಕಿ ಹರಿಯುವ ಜಲಪಾತದ ಕುತೂಹಲ ಮತ್ತೊಂದು ಕಡೆಯಾಗಿದೆ.
Advertisement
ಈ ಜಲಧಾರೆಯನ್ನು ನೋಡಿದರೆ ಇದು ಮಲೆನಾಡು ಇರಬೇಕು ಅಂದುಕೊಂಡಿದ್ದರೆ ಖಂಡಿತ ನಿಮ್ಮ ಊಹೆ ತಪ್ಪು. ಬಿಸಿಲನಾಡು ಎಂದು ಕರೆಯಲ್ಪಡುವ ಯಾದಗಿರಿ ಜಿಲ್ಲೆಯಲ್ಲಿರುವ ಈ ಸೊಬಗ ಸಿರಿ ಮಿನಿಮಲೆನಾಡು ಎಂದೆ ಪ್ರಸಿದ್ಧಿ ಪಡೆದಿದೆ. ಜಿಲ್ಲೆಯ ಗುರುಮಠಕಲ್ ತಾಲೂಕಿನ ಚಿಂತನಹಳ್ಳಿ ಬಳಿಯ ಪ್ರಕೃತಿ ಮಾತೆಯ ಮಡಿಲಲ್ಲಿ ಗವಿ ಸಿದ್ಧಲಿಂಗೇಶ್ವರ ಜಲಪಾತವಿದೆ. ಇದು ಪ್ರಕೃತಿ ಪ್ರೇಮಿಗಳನ್ನು ಹಾಗೂ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಜಿಲ್ಲಾ ಕೇಂದ್ರದಿಂದ ಕೇವಲ 35 ಕಿಲೋ ಮೀಟರ್ ಕ್ರಮಿಸಿದರೆ ಬೆಟ್ಟ ಗುಡ್ಡಗಳ ನಡುವೆ ತನ್ನದೆ ಐಸಿರಿ ಹೊತ್ತ ಈ ವಿಶೇಷ ಜಲಪಾತ ಸಿಗುತ್ತದೆ.
Advertisement
Advertisement
ಎಲ್ಲಾ ಋತುವಿನಲ್ಲೂ ಧುಮ್ಮಿಕ್ಕಿ ಹರಿಯುವ ಜಲಪಾತಕ್ಕೆ ಇಲ್ಲಿಯವರೆಗೂ ಬರದ ಛಾಯೆ ಆವರಿಸಿಲ್ಲ. ಇದು ಈ ಜಲಪಾತದ ಮತ್ತೊಂದು ವಿಶೇಷ. ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಅನುಭವಿಸಲೆಂದೇ ಕಲಬುರಗಿ, ರಾಯಚೂರು ಮತ್ತು ಜಿಲ್ಲೆಯ ಗಡಿಭಾಗದಲ್ಲಿರುವ ತೆಲಂಗಾಣ, ಆಂಧ್ರದಿಂದ ಪ್ರತಿದಿನ ನೂರಾರು ಪ್ರವಾಸಿಗರ ದಂಡೆ ಇಲ್ಲಿಗೆ ಬರುತ್ತದೆ. ಹಚ್ಚ ಹಸಿರಿನ ಸೊಬಗಿನ ಮಧ್ಯೆ ವಯ್ಯಾರದಿಂದ ಹರಿಯುತ್ತಿರುವ ಜಲಧಾರೆಯ ನಡುವೆ ನೆನೆದು ಪ್ರವಾಸಿಗರು ಮತ್ತು ಪುಟಾಣಿಗಳು ಗವಿಯೊಳಗೆ ಹೋಗುತ್ತಾರೆ.
Advertisement
ಈ ಜಲಪಾತದ ಅಡಿಯ ಗುಹೆಯಲ್ಲಿ ಗವಿ ಸಿದ್ಧಲಿಂಗೇಶ್ವರ ದೇವಸ್ಥಾನವಿದೆ. ವಿಶಿಷ್ಟ ಎಂದರೆ ಗವಿ ಸಿದ್ಧಲಿಂಗೇಶ್ವರನ ದರ್ಶನಕ್ಕೆ ಹೋಗಬೇಕೆಂದರೆ ಜಲಪಾತದಿಂದ ಧುಮುಕುವ ನೀರಿನ ಅಡಿಯಲ್ಲೇ ಸಾಗಿ, ನೀರಿನಲ್ಲಿ ಮಿಂದ್ದೆದ್ದು ಸಿದ್ಧಲಿಂಗೇಶ್ವರನ ದರ್ಶನ ಪಡೆಯಬೇಕು.
ಜಲಪಾತದ ನೀರಿನಿಂದ ಪವಿತ್ರರಾಗಿ ದೇವರ ದರ್ಶನ ಪಡೆದು ಕೃತಾರ್ಥರಾಗುವುದು ಒಂದೆಡೆಯಾದರೆ, ಜಲಧಾರೆಯ ಅಡಿಯಲ್ಲಿ ಮಿಂದೆದ್ದು ಹೊರ ಬರುವುದು ಮತ್ತೊಂದೆಡೆ. ಇದು ಪ್ರವಾಸಿಗರನ್ನು ಪುಳಕಿತರನ್ನಾಗಿಸುತ್ತಿದೆ. ಹೀಗಾಗಿ ಇಲ್ಲಿ ಪ್ರವಾಸಿಗರ ಜೊತೆ ಭಕ್ತರು ಸಹ ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ.
ಆದರೆ ವಿಪರ್ಯಾಸವೆಂದರೆ ಇಂತಹ ವಿಶಿಷ್ಟ ಜಿಲ್ಲೆಯಲ್ಲಿದ್ದರೂ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಈ ಸ್ಥಳವನ್ನು ಅಭಿವೃದ್ಧಿ ಪಡಿಸುವಲ್ಲಿ ನಿರ್ಲಕ್ಷ್ಯ ವಹಿಸುತ್ತಿವೆ. ಇದು ಇಲ್ಲಿಗೆ ಬರುವ ಪ್ರವಾಸಿಗರಿಗೆ ಕೊಂಚ ಅಸಮಾಧಾನ ತರುತ್ತಿದೆ. ಯಾದಗಿರಿ ಅಂದರೆ ತುಂಬಾ ಬಿಸಿಲು ಎನ್ನುವವರು ನಿಮ್ಮ ಆತಂಕ ಬಿಟ್ಟು ಈ ಸ್ಥಳಕ್ಕೆ ಭೇಟಿ ನೀಡಬಹುದು. ಈ ಬಿಸಿಲು ನಾಡಿನಲ್ಲಿ ಜಲಧಾರೆಯ ಸಿರಿಯನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಶ್ರೀ ಗವಿ ಸಿದ್ಧಲಿಂಗೇಶ್ವರನ ಆಶೀರ್ವಾದ ಸಹ ಸಿಗಲಿದೆ.