– 4ನೇ ದಿನದಾಟ ಅಂತ್ಯಕ್ಕೆ ಭಾರತ 252/9, ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ 445 ರನ್
– ಫಾಲೋ ಆನ್‌ನಿಂದ ಬಚಾವ್ ಆಗುತ್ತಿದ್ದಂತೆಯೇ ಗಂಭೀರ್, ವಿರಾಟ್ ಸಂಭ್ರಮ
ಬ್ರಿಸ್ಬೇನ್: ದಿನದ ಕೊನೆಯಲ್ಲಿ ಆಕಾಶ್ ದೀಪ್ (Akash Deep), ಜಸ್ಪ್ರೀತ್ ಬುಮ್ರಾ 39 ರನ್‌ಗಳ ಜೊತೆಯಾಟದಿಂದ ಭಾರತ, ಆಸ್ಟ್ರೇಲಿಯಾ ವಿರುದ್ಧ ಫಾಲೋ ಆನ್‌ನಿಂದ ಬಚಾವ್ ಆಗಿದೆ. ಇದರಿಂದ 3ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳುವ ಸಾಧ್ಯತೆಯಿದೆ.
ವೂಲೂಂಗಬ್ಬಾದ ಬ್ರಿಸ್ಬೇನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ ಆಡುತ್ತಿದೆ. ಮಳೆ ಕಾಟದ ಹೊರತಾಗಿಯೂ 4ನೇ ದಿನದ ಅಂತ್ಯಕ್ಕೆ ಭಾರತ 74.5 ಓವರ್‌ಗಳಲ್ಲಿ 9 ವಿಕೆಟ್‌ಗೆ 252 ರನ್ ಗಳಿಸಿದೆ. ವೇಗಿಗಳಾದ ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ (Jasprit Bumrah) ಅಜೇಯರಾಗುಳಿದಿದ್ದು, ಕೊನೆಯ ದಿನ ಕ್ರೀಸ್ ಆರಂಭಿಸಲಿದ್ದಾರೆ.
Advertisement
Advertisement
ಮೊದಲು ಬ್ಯಾಟಿಂಗ್ ಆರಂಭಿಸಿದ್ದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 445 ರನ್‌ಗಳಿಗೆ ಆಲೌಟ್ ಆಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ 3ನೇ ದಿನ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು 51 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು.
Advertisement
ಆರಂಭಿಕ ಕೆ.ಎಲ್ ರಾಹುಲ್ 84 ರನ್, ರವೀಂದ್ರ ಜಡೇಜಾ 77 ರನ್‌ಗಳ ಕೊಡುಗೆ ನೀಡಿದರೂ, ಫಾಲೋ ಆನ್‌ಗೆ ತುತ್ತಾಗುವ ಭೀತಿಯಲ್ಲಿತ್ತು. ಆದ್ರೆ ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದ ಆಕಾಶ್ ದೀಪ್ ಪ್ಯಾಟ್ ಕಮ್ಮಿನ್ಸ್ ಅವರ ಪಾಲಿನ 21ನೇ ಓವರ್‌ನ 4ನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಟೀಂ ಇಂಡಿಯಾವನ್ನು ಫಾಲೋ ಆನ್‌ನಿಂದ ಕಾಪಾಡಿದರು. ಜಸ್ಪ್ರೀತ್ ಬುಮ್ರಾ ಸಹ ಬ್ಯಾಟಿಂಗ್‌ನಲ್ಲಿ ನೆರವಾದರು.
Advertisement
ಟೀಂ ಇಂಡಿಯಾ ಪರ ಕೆ.ಎಲ್ ರಾಹುಲ್ 84 ರನ್ (139 ಎಸೆತ, 8 ಬೌಂಡರಿ), ರವೀಂದ್ರ ಜಡೇಜಾ 77 ರನ್ (123 ರನ್, 7 ಬೌಂಡರಿ, 1 ಸಿಕ್ಸರ್), ರೋಹಿತ್ ಶರ್ಮಾ 10 ರನ್, ನಿತೀಶ್ ಕುಮಾರ್ ರೆಡ್ಡಿ 16 ರನ್ ಗಳಿಸಿದ್ರೆ ಉಳಿದವರು ಅಲ್ಪಮೊತ್ತಕ್ಕೆ ಪೆವಿಲಿಯನ್ ಸೇರಿದರು. ಜಸ್ಪ್ರೀತ್ ಬುಮ್ರಾ 10 ರನ್, ಆಕಾಶ್ ದೀಪ್ 27 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಏನಿದು ಫಾಲೊ-ಆನ್ ನಿಯಮ?
ಎಂಸಿಸಿ ಕಾನೂನು 14.1.1 ರ ಪ್ರಕಾರ, 5 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ತಲಾ ಎರಡು ಇನ್ನಿಂಗ್ಸ್ ಟೆಸ್ಟ್ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡುವ ತಂಡವು ಕನಿಷ್ಠ 200 ರನ್‌ಗಳಿಂದ ಮುನ್ನಡೆ ಸಾಧಿಸಿದರೆ, ಎದುರಾಳಿ ತಂಡಕ್ಕೆ ಅದರ ಇನ್ನಿಂಗ್ಸ್ ಅನ್ನು ಅನುಸರಿಸಲು (ಫಾಲೊ-ಆನ್) ಹೇಳುವ ನಿಯಮ ಆಗಿದೆ. ಅಂದ್ರೆ ಮೊದಲ ಇನ್ನಿಂಗ್ಸ್‌ನಲ್ಲಿ ಚೇಸಿಂಗ್ ಮಾಡುವ ತಂಡವು 200 ರನ್‌ಗಳ ಹಿನ್ನಡೆ ಅನುಭವಿಸಿದರೆ, 2ನೇ ಇನ್ನಿಂಗ್ಸ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಬೇಕಾಗುತ್ತದೆ.
ಭಾರತಕ್ಕೆ ಫಾಲೋ ಆನ್‌ನಿಂದ ಪಾರಾಗಲು 246 ರನ್‌ಗಳ ಅಗತ್ಯವಿತ್ತು. ಆದ್ರೆ 252 ರನ್ ಗಳಿಸಿರೋದ್ರಿಂದ ಪಂದ್ಯವನ್ನು ಡ್ರಾ ಮಾಡುವ ಪ್ರಯತ್ನ ನಡೆಸಬಹುದಾಗಿದೆ.
ಡ್ರೆಸ್ಸಿಂಗ್ ರೂಮ್‌ನಲ್ಲಿ ಕೊಹ್ಲಿ, ಗಂಭೀರ್ ಸಂಭ್ರಮ:
213 ರನ್‌ಗಳಿಗೆ ಭಾರತ ತನ್ನ 9ನೇ ವಿಕೆಟ್ ಕಳೆದುಕೊಂಡಿತು. ಇದರಿಂದ ಭಾರತ ಫಾಲೋ ಆನ್‌ಗೆ ತುತ್ತಾಗಿ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಆದ್ರೆ ಕೊನೆಯ ವಿಕೆಟ್‌ಗೆ ಜೊತೆಗೂಡಿದ ಬುಮ್ರಾ, ಆಕಾಶ್‌ದೀಪ್ ನಿರೀಕ್ಷೆಗೂ ಮೀರಿದ ಪ್ರದರ್ಶನ ತೋರಿದರು. ಪ್ಯಾಟ್ ಕಮ್ಮಿನ್ಸ್ ಅವರ 21ನೇ ಓವರ್‌ನ 4ನೇ ಎಸೆತವನ್ನು ಆಕಾಶ್ ದೀಪ್ ಬೌಂಡರಿಗೆ ಅಟ್ಟುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಹಿರಿಯ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ವಿರಾಟ್ ಕೊಹ್ಲಿ, ಕೋಚ್ ಗೌತಮ್ ಗಂಭೀರ್, ನಾಯಕ ರೋಹಿತ್ ಶರ್ಮಾ, ಪರಸ್ಪರ ಕೈಕುಲುಕಿ, ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಈ ಕುರಿತ ಫೋಟೋಗಳು ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.