ಬೆಂಗಳೂರು: ರಾಜ್ಯದ ಖ್ಯಾತ ಸಾಹಿತಿ ಮತ್ತು ಪತ್ರಕರ್ತ ಪಿ.ಲಂಕೇಶ್ ಅವರ ಮಗಳಾಗಿ ಬೆಳೆದ ಗೌರಿ ಲಂಕೇಶ್ ತಂದೆಯ ಆದರ್ಶದಲ್ಲಿ ಬದುಕನ್ನು ಕಟ್ಟಿಕೊಂಡು ಜೀವನ ನಡೆಸುತ್ತಿದ್ದರು. ತಮ್ಮ ವಿಶೇಷ ಬರವಣಿಗೆ, ಚಿಂತನೆಗಳಿಂದ ಹೆಚ್ಚು ಪ್ರಸಿದ್ಧಿ ಪಡೆದುಕೊಂಡ ಹಿರಿಯ ವಿಚಾರವಾದಿಯಾಗಿದ್ದರು.
ಗೌರಿ ಅವರು 1962ರಲ್ಲಿ ಬೆಂಗಳೂರಿನಲ್ಲಿ ಪಿ.ಲಂಕೇಶ್ ಅವರ ಪುತ್ರಿಯಾಗಿ ಜನಿಸಿದರು. ಗೌರಿ ಅವರು ಓರ್ವ ಸಹೋದರ ಮತ್ತು ಸಹೋದರಿಯನ್ನು ಹೊಂದಿದ್ದಾರೆ. ಸಹೋದರ ಇಂದ್ರಿಜಿತ್ ಲಂಕೇಶ್ ನಿದೇಶಕರಾಗಿ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅಂತೆಯೇ ಸಹೋದರಿ ಕವಿತಾ ಲಂಕೇಶ್ ಸಹ ಸಿನಿಮಾ ರಂಗದಲ್ಲಿ ನಿರ್ದೇಶಕರಾಗಿದ್ದಾರೆ.
ಗೌರಿ ಲಂಕೇಶ್ 2005ರಲ್ಲಿ ತಮ್ಮದೇ ಟ್ಯಾಬ್ಲೈಡ್ ಪತ್ರಿಕೆಯನ್ನು ಆರಂಭಿಸಿದ್ದರು. ಇನ್ನೂ ಗೌರಿ ಅವರು ರಾಜ್ಯ ನಕ್ಸಲರ ಶರಣಾಗತಿ ಸಮಿತಿಯ ಸದಸ್ಯೆ, ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ತಂದೆ ಪಿ.ಲಂಕೇಶ್ ಆರಂಭಿಸಿದ್ದ ಪತ್ರಿಕೆಯನ್ನು ಸಹ ತಾವು ಮುನ್ನೆಡೆಸುತ್ತಿದ್ದರು.