ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಪ್ರಕರಣದ ಸುದೀರ್ಘ 9,235 ಪುಟಗಳಿರುವ ಚಾರ್ಜ್ ಶೀಟ್ ಅನ್ನು ಟ್ರಂಕ್‍ನಲ್ಲಿ ಇಟ್ಟು ಎಸ್‍ಐಟಿ ಅಧಿಕಾರಿಗಳು ಕೋರ್ಟ್‍ಗೆ ಸಲ್ಲಿಸಿದ್ದಾರೆ.
ಎಸ್‍ಐಟಿ ತನಿಖಾಧಿಕಾರಿ ಎಂ.ಎನ್.ಅನುಚೇತ್ ಅವರ ಮೂಲಕ 1ನೇ ಸಿಸಿಎಚ್ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಲಾಗಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಒಟ್ಟು 18 ಜನ ಆರೋಪಿಗಳು ಭಾಗಿ ಆಗಿರುವ ಕುರಿತು ಮಾಹಿತಿ ನೀಡಲಾಗಿದೆ.
Advertisement
ಒಟ್ಟು 16 ಜನರನ್ನು ಬಂಧಿಸಿ ಕೋಕಾ ಕಾಯ್ದೆಯಡಿ ಎಸ್‍ಐಟಿ ಪ್ರಕರಣವನ್ನು ದಾಖಲಿಸಿತ್ತು. ಗೌರಿ ಹತ್ಯೆ ಪ್ರಕರಣ ಸಂಬಂಧ 650 ಪುಟಗಳ ಮೊದಲ ದೋಷಾರೋಪ ಪಟ್ಟಿಯನ್ನು 2018ರ ಮೇ ತಿಂಗಳಲ್ಲಿ ಎಸ್‍ಐಟಿ ಸಲ್ಲಿಸಿತ್ತು. ಹೆಚ್ಚುವರಿ ಆರೋಪ ಸಲ್ಲಿಕೆಗೆ ನವೆಂಬರ್ 27 ಕೊನೆಯ ದಿನವಾಗಿತ್ತು. ಹೀಗಾಗಿ ಶುಕ್ರವಾರ ಎಸ್‍ಐಟಿ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದೆ.
Advertisement
Advertisement
ಈ ಪ್ರಕರಣದಲ್ಲಿ ಬೇಕಾಗಿದ್ದ ದಾದಾ ಹಾಗೂ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿರುವುದಾಗಿ ಚಾರ್ಜ್ ಶೀಟ್‍ನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೇ 450ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ.
Advertisement
ಪ್ರಕರಣ ಬಿಡಿಸಿದ ಎಸ್‍ಐಟಿ:
ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಂ ಬಡಾವಣೆಯ ನಿವಾಸದ ಮುಂದೆ ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್ 5ರಂದು ಸಂಜೆ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಕೃತ್ಯ ರಾಜ್ಯ ಹಾಗೂ ರಾಷ್ಟ್ರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಪತ್ರಕರ್ತೆ ಹಾಗೂ ವಿಚಾರವಾದಿಯಾಗಿದ್ದ ಗೌರಿ ಹತ್ಯೆ ವಿದೇಶ ಮಟ್ಟದಲ್ಲಿಯೂ ಸುದ್ದಿ ಮಾಡಿತ್ತು.
ಪ್ರಕರಣ ತನಿಖೆಯನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಸರ್ಕಾರವು, ಐಜಿಪಿ ಬಿ.ಕೆ.ಸಿಂಗ್ ಉಸ್ತುವಾರಿಯಲ್ಲಿ ಡಿಸಿಪಿ ಎಂ.ಎನ್.ಅನುಚೇತ್ ಹಾಗೂ ಅಂದಿನ ಸಿಐಡಿ ಎಸ್‍ಪಿ ಹರೀಶ್ ಪಾಂಡೆ ನೇತೃತ್ವದಲ್ಲಿ ಎಸ್‍ಐಟಿ ರಚಿಸಿತ್ತು. 2018ರ ಫೆಬ್ರವರಿಯಲ್ಲಿ ಪ್ರಕರಣದ ಸಂಬಂಧ ಮೊದಲ ಆರೋಪಿಯಾಗಿ ಮದ್ದೂರು ತಾಲೂಕಿನ ಹಿಂದೂ ಪರ ಸಂಘಟನೆ ಮುಖಂಡ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆಮಂಜನನ್ನು ಎಸ್‍ಐಟಿ ಬಂಧಿಸಿತು.
ಈತನ ವಿಚಾರಣೆಯ ಬಳಿಕ ಅಮೋಲ್ ಕಾಳೆ ಸೇರಿ ನಾಲ್ವರನ್ನು ಬಂಧಿಸಿದ್ದರು. ಬಂಧಿತರ ವಿಚಾರಣೆ ವೇಳೆ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್ ಕೊಲೆ ಸಂಚು ರೂಪಿಸಿದ್ದು ಬಯಲಾಗಿತ್ತು. ಈ ಬೆಳವಣಿಗೆಯ ನಂತರ ಎಸ್‍ಐಟಿ ಅಧಿಕಾರಿಗಳು, ಮಹಾರಾಷ್ಟ್ರ ಹಾಗೂ ಗೋವಾದಲ್ಲಿಯೂ ಗೌರಿ ಹತ್ಯೆಗೆ ಪೂರ್ವ ಸಿದ್ಧತೆ ನಡೆಸಿದ್ದರು ಎನ್ನುವ ಮಾಹಿತಿ ಪಡೆದಿದ್ದರು. ಇದಾದ ಬಳಿಕ ಮಹಾರಾಷ್ಟ್ರದ ಮೂಲದ ಅಮೋಲ್ ಕಾಳೆ ಸೇರಿದಂತೆ 15 ಮಂದಿ ಆರೋಪಿಗಳು ಹಾಗೂ ಅವರ ಪೂರ್ವಾಪರ ಮಾಹಿತಿ ಸಂಗ್ರಹಿಸಿ ದೋಷಾರೋಪಟ್ಟಿ ಸಲಿಸಲಾಗಿತ್ತು.
ಗೌರಿ ಹತ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಆಗಿದೆ ಎನ್ನವುದನ್ನು ತಿಳಿಸಿತ್ತು. ಅಷ್ಟೇ ಅಲ್ಲದೆ ಮಹಾರಾಷ್ಟ್ರದ ಮೂಲದ ಅಮೋಲ್ ಕಾಳೆ ತಂಡವು, ಪ್ರಗತಿಪರ ಚಿಂತಕರ ಕೊಲೆಗೆ ಸಂಚು ರೂಪಿಸಿತ್ತು ಎನ್ನುವ ಪ್ರಕರ ಮಾಹಿತಿ ಹೊರಹಾಕಿತ್ತು. ಈ ತನಿಖೆಯಿಂದಾಗಿ ಮಹಾರಾಷ್ಟ್ರ ಚಿಂತಕರಾದ ಡಾ.ನರೇಂದ್ರ ದಾಭೋಲ್ಕರ್, ಗೋವಿಂದ ಪಾನ್ಸರೆ ಹಾಗೂ ಕರ್ನಾಟಕದ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಅವರ ಹತ್ಯೆ ಸಂಚು ಸಹ ಬಯಲಾಯಿತು. ಅಷ್ಟೇ ಅಲ್ಲದೆ ಮಹಾರಾಷ್ಟ್ರದ ಹಿಂದೂ ಪರ ಸಂಘಟನೆಗಳ ಕೆಲ ಮುಖಂಡರ ಕಾನೂನುಬಾಹಿರ ಕೃತ್ಯಗಳು ಬೆಳಕಿಗೆ ಬಂದವು.
ಆರೋಪಿಗಳು ಯಾರು?
ಪ್ರಕರಣದ ಪ್ರಮುಖ ಆರೋಪಿ (ಎ1) ಮಹಾರಾಷ್ಟ್ರ ಅಮೋಲ್ ಕಾಳೆ ಇವನು ಹತ್ಯೆಯ ಪ್ರಧಾನ ಸಂಚುಕಾರ, ಉಳಿದಂತೆ (ಎ2) ವಿಜಯಪುರ ಜಿಲ್ಲೆ ಸಿಂದಗಿಯ ಪರಶುರಾಮ್ ವಾಗ್ಮೋರೆ -ಶೂಟರ್, (ಎ3) ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ – ಬೈಕ್ ರೈಡರ್, (ಎ4) ಹುಬ್ಬಳ್ಳಿ ಅಮಿತ್ ಬುದ್ಧ -ರೈಡರ್ ಸಹಾಯಕ, (ಎ5) ಮಹಾರಾಷ್ಟ್ರದ ಅಮಿತ್ ದೇಗ್ವೇಕರ್ -ಹಣಕಾಸು ಉಸ್ತುವಾರಿ, (ಎ6) ಬೆಳಗಾವಿಯ ಭರತ್ ಕುರ್ನೆ – ಶಸ್ತ್ರಾಸ್ತ್ರ ತರಬೇತಿಗೆ ಆಶ್ರಯ ನೀಡಿದ್ದು, (ಎ7) ಮಹಾರಾಷ್ಟ್ರದ ಸುಧನ್ವಾ ಗೋಲೆಧಕರ್ – ಸಂಚುಗಾರ, (ಎ8) ಮಹಾರಾಷ್ಟ್ರದ ಶರದ್ ಕಲಾಸ್ಕರ್ – ಸಂಚುಗಾರ, (ಎ9) ಕೊಡಗಿನ ರಾಜೇಶ್ ಬಂಗೇರಾ – ಶಸ್ತ್ರಾಸ್ತ್ರ ತರಬೇತುದಾರ, (ಎ10) ಮಹಾರಾಷ್ಟ್ರದ ಶ್ರೀಕಾಂತ್ ಪಂಗಾರ್ಕರ್ – ಸಂಚುಗಾರ ಇವರನ್ನು ಸೇರಿದಂತೆ ಒಟ್ಟು 17 ಜನ ಆರೋಪಿಗಳಿದ್ದಾರೆ.
ಕೋಕಾ ಅಂದ್ರೆ ಏನು?:
ಕೋಕಾ ಅಂದ್ರೆ ಸಂಘಟಿತ ಅಪರಾಧಗಳ ತಡೆ ಕಾಯ್ದೆ (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಜಿಸ್ಡ್ ಕ್ರೈಮ್ಸ್ ಆಕ್ಟ್) ಕಲಂ 3ರ ಅಡಿ ಪ್ರಕರಣದ ತನಿಖೆ ನಡೆಸಿ ಎಸ್‍ಐಟಿ ಈಗ ದೋಷಾರೋಪ ಪಟ್ಟಿ ಸಲ್ಲಿಸಿದೆ. ಸಂಘಟಿತರಾಗಿ ಅಪರಾಧ ಕೃತ್ಯ ಎಸಗಿ, ವ್ಯಕ್ತಿಯ ಸಾವಿಗೆ ಕಾರಣರಾಗುವವರಿಗೆ ಗರಿಷ್ಠ ಗಲ್ಲು ಶಿಕ್ಷೆ ಅಥವಾ ಜೀವನ ಪರ್ಯಂತ ಜೈಲು ಶಿಕ್ಷೆ ಜತೆಗೆ 1 ಲಕ್ಷ ರೂ.ಗೆ ಕಡಿಮೆ ಇಲ್ಲದಂತೆ 5 ಲಕ್ಷ ರೂ.ವರೆಗೂ ದಂಡ ವಿಧಿಸಲು ಈ ಕಾಯ್ದೆಯ ಅಡಿ ಅವಕಾಶವಿದೆ. ಆರೋಪಿಗಳಿಗೆ ಕನಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ವ್ಯಕ್ತಿಯ ಸಾವಿಗೆ ಕಾರಣರಾಗುವವರಿಗೆ ಗರಿಷ್ಠ ಗಲ್ಲು ಶಿಕ್ಷೆಯನ್ನೂ ವಿಧಿಸಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv