ಗೌರಿ ಲಂಕೇಶ್ ಹತ್ಯೆ ಪ್ರಕರಣ- ಎಸ್‍ಐಟಿ ನಡೆಸಿದ ತನಿಖೆಯ ರೋಚಕ ಇನ್ ಸೈಡ್ ಸ್ಟೋರಿ

Public TV
3 Min Read
Gauri Lankesh 768x403 1

ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಒಂದು ಹಂತದವರೆಗೆ ತಲುಪಿದೆ. ಶೂಟ್ ಮಾಡಿದ್ದ ಎನ್ನಲಾಗಿರುವ ಆರೋಪಿ ಪರಶುರಾಮ್ ವಾಗ್ಮೋರೆ ಎಂಬ ಯುವಕನನ್ನು ಎಸ್‍ಐಟಿ ಈಗಾಗಲೇ ಬಂಧಿಸಿದೆ. ಆದರೆ ಗೌರಿ ಲಂಕೇಶ್ ಕೊಲೆಯಾದ ಬಳಿಕ ಎಸ್‍ಐಟಿ ಅಧಿಕಾರಿಗಳು ನಡೆಸಿರುವ ತನಿಖೆಯ ರೋಚಕ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಅಮೂಲ್ ಕಾಳೆ ರೋಚಕ ಸತ್ಯವನ್ನು ಬಹಿರಂಗ ಮಾಡಿದ್ದಾನೆ. ಈ ಅಮೂಲ್ ಕಾಳೆಗೆ ಯುವಕರನ್ನು ಪರಿಚಯಿಸುತ್ತಿದ್ದ ವ್ಯಕ್ತಿ ಸುಜಿತ್. ಹಿಂದೂಪರ ಸಮಾವೇಶದಲ್ಲಿ ಭಾಗಿಯಾಗುತ್ತಿದ್ದ ಸುಜಿತ್, ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುಮಾರು 10 ಸಾವಿರ ಯುವಕರ ನಂಬರ್ ಪಡೆದುಕೊಂಡಿದ್ದನು. ಬಳಿಕ ಪ್ರತಿಯೊಬ್ಬರಿಗೂ ಕರೆ ಮಾಡಿ ಪರಿಚಯಿಸಿಕೊಂಡಿದ್ದನು. ಫೋನ್ ನಲ್ಲಿ ಮಾತನಾಡುತ್ತಾ, ಧರ್ಮ ವಿರೋಧಿ ಚಟುವಟಿಕೆಗಳನ್ನು ವಿರೋಧಿಸುವವರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದ ಯುವಕರನ್ನು ಸುಜಿತ್ ಆಯ್ಕೆ ಮಾಡಿಕೊಳ್ಳುತ್ತಿದ್ದನು.

Gauri Wagmore

ರೈಫಲ್ ತರಬೇತಿ: ಯುವಕರನ್ನು ಆಯ್ಕೆ ಮಾಡಿಕೊಂಡ ಬಳಿಕ ಎಲ್ಲರೊಂದಿಗೆ ನಯವಾಗಿ ಮಾತನಾಡುತ್ತಾ ಧರ್ಮ ವಿರೋಧಿಗಳನ್ನು ಕೊಲೆ ಮಾಡುವಂತೆ ಪ್ರೇರೇಪಿಸಿ ಮೈಂಡ್ ವಾಶ್ ಮಾಡುತ್ತಿದ್ದನಂತೆ. ಇದೇ ರೀತಿ ಯುವಕರ ಮೈಂಡ್ ವಾಶ್ ಬಳಿಕ ಎಲ್ಲರನ್ನು ‘ದಾದಾ’ ಎಂಬಾತನ ಬಳಿ ಕಳುಹಿಸಿದ್ದನು. ಈ ದಾದಾನ ಅಣತಿಯಂತೆ ಮತ್ತೊಮ್ಮೆ ಯುವಕರ ಪುನರ್ ಆಯ್ಕೆ ನಡೆಯುತ್ತಿತ್ತು. ಆಯ್ಕೆಗೊಂಡ ಯುವಕರಿಗೆ ಸತಾರಾ, ಗೋವಾ, ಮಹಾರಾಷ್ಟ್ರ, ಬೆಳಗಾವಿಯ ನಿರ್ಜನ ಪ್ರದೇಶದಲ್ಲಿ ಏರ್ ಗನ್ ನ ಮೂಲಕ ರೈಫಲ್ ಬಳಸಲು ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿವೆ.

ಪಕ್ಕಾ ಶಾರ್ಪ್ ಶೂಟರ್ ಅಂತಾ ತಿಳಿದ ಮೇಲೆ ದಾದಾ ಎಂಬಾತ ಬರೋಬ್ಬರಿ 100 ಯುವಕರನ್ನು ಅಮೂಲ್ ಕಾಳೆಗೆ ಪರಿಚಯಿಸಿದ್ದನು. ಈ 100 ಯುವಕರಲ್ಲಿ ಪರಶುರಾಮ್ ವಾಗ್ಮೋರೆ ಸಹ ಒಬ್ಬ ಎಂದು ಹೇಳಲಾಗುತ್ತಿದೆ. ಹಿಂದೂ ಧರ್ಮದ ಉದ್ಧಾರಕ್ಕಾಗಿ ನೀವು ವಿಷ್ಣುವಿನ ಅವತಾರದಲ್ಲಿ ಜನಿಸಿದ್ದೀಯಾ, ಧರ್ಮದ ವಿರುದ್ಧ ಮಾತನಾಡುವರನ್ನು ಕೊಲ್ಲಬೇಕು. ನಿನ್ನ ಕೈಯಲ್ಲಿರುವ ಬಂದೂಕು ವಿಷ್ಣುವಿನ ಬಳಿಯ ಸುದರ್ಶನ ಚಕ್ರವಿದ್ದಂತೆ. ಯಾರು ಧರ್ಮಕ್ಕೆ ವಿರುದ್ಧ ಮಾತನಾಡುತ್ತಾರೆಯೋ ಅಂತಹವರನ್ನು ಶತ್ರುಗಳ ರೀತಿಯಲ್ಲಿಯೇ ಕೊಂದು ಮುಗಿಸಬೇಕು ಎಂದು ಅಮೂಲ್ ಕಾಳೆ, ಪರಶುರಾಮ್ ವಾಗ್ಮೋರೆಗೆ ಉಪದೇಶ ಮಾಡಿ ಬೆಂಗಳೂರಿಗೆ ಕಳುಹಿಸಿದ್ದ ಎಂಬ ಮಾಹಿತಿಯಿದೆ.

gauri lankesh case 2

ಒಟ್ಟು 13 ಹೆಸರಾಂತ ವ್ಯಕ್ತಿಗಳ ಕೊಲೆಗೆ ಆರೋಪಿಗಳು ಸಂಚು ರೂಪಿಸಿದ್ದರು. ಗೌರಿ ಲಂಕೇಶ್ ಹತ್ಯೆಯ ಬಳಿಕ ಸಾಹಿತಿ, ವಿಚಾರವಾದಿ ಕೆ.ಎಸ್.ಭಗವಾನ್ ಕೊಲೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ಅಲಿಯಾಸ್ ಹೊಟ್ಟೆ ಮಂಜನ ಬಂಧನವಾಯಿತು. ಬಂಧನದ ಬಳಿಕ ಎಲ್ಲ ಆರೋಪಿಗಳು ಕೆಲವು ದಿನ ತಮಗೆ ಏನೂ ತಿಳಿಯದಂತೆ ಪ್ರಕರಣದಿಂದ ದೂರ ಉಳಿದುಕೊಂಡಿದ್ದರು. ವಿಚಾರಣೆ ವೇಳೆ ಹೊಟ್ಟೆ ಮಂಜ, ಗಿರೀಶ್ ಕಾರ್ನಾಡ್, ಭಗವಾನ್, ಲಲಿತಾನಾಯಕ್, ವಿನಯ್ ಕುಲಕರ್ಣಿ, ಎಂ.ಬಿ.ಪಾಟೀಲ್ ಸೇರಿದಂತೆ ಹಲವರ ಹತ್ಯೆಗೆ ಸ್ಕೆಚ್ ರೂಪಿಸಲಾಗಿತ್ತು ಎಂಬ ಮಾಹಿತಿ ಹೊರಹಾಕಿದ್ದ. ಇದೇ ವಿಚಾರಣೆ ವೇಳೆ ಪ್ರವೀಣ್, ಮನೋಹರ್, ಸುಜಿತ್, ಅಮೂಲ್ ಕಾಳೆ ಸಿಕ್ಕಿ ಬಿದ್ದರು.

ಯಾರು ಈ ದಾದಾ?:
ಎಸ್‍ಐಟಿ ಅಧಿಕಾರಿಗಳಿಗೆ ಮೂವರು ಆರೋಪಿಗಳು ಸಿಕ್ಕಿದ್ದು, ಮೂವರಲ್ಲಿ ಪರಶುರಾಮ್ ವಾಗ್ಮೋರೆ ಶೂಟ್ ಮಾಡಿದ್ದಾತ ಎಂಬುದು ಸ್ಪಷ್ಟವಾಗಿದೆ. ಇದೀಗ ಅಮೂಲ್ ಕಾಳೆ ನೀಡಿರುವ ಮಾಹಿತಿ ಆಧಾರದ ಮೇಲೆ ಈ ದಾದಾ ಮಹಾರಾಷ್ಟ್ರದಲ್ಲಿ ಅಡಗಿ ಕುಳಿತಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅಮೂಲ್ ಕಾಳೆಯಿಂದ ಮಾಹಿತಿ ಪಡೆದು ಅಧಿಕಾರಿಗಳು ದಾದಾನ ಮುಖ ಚಹರೆಯ ಸ್ಕೆಚ್ ತಯಾರಿಸುತ್ತಿದ್ದಾರೆ. ದಾದಾನಿಂದ ಆಯ್ಕೆಗೊಂಡು ತರಬೇತಿ ಪಡೆದ ಯುವಕರಿಗೆ ಒಬ್ಬೊಬ್ಬ ಹಿಂದೂ ವಿರೋಧಿಯನ್ನು ಕೊಲ್ಲುವಂತೆ ಸೂಚಿಸಲಾಗಿತ್ತು ಎಂಬ ಆತಂಕಕಾರಿ ಮಾಹಿತಿ ಲಭಿಸಿದೆ.

GAURI

2013 ರಲ್ಲಿ ನಡೆದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ನಡೆದಿತ್ತು. ದಾಬೋಲ್ಕರ್ ಹತ್ಯೆಯ ಸಂಬಂಧ ಡಾ. ವೀರೇಂದ್ರ ತಾವಡೆ ಎಂಬಾತನನ್ನು ಎನ್‍ಐಎ ಬಂಧಿಸಿತ್ತು. ಈ ಬಂಧಿತ ವೀರೇಂದ್ರ ತಾವಡೆ ಹಿಂದೂ ಸಂಸ್ಥೆಯೊಂದರ ಸದಸ್ಯನೂ ಆಗಿದ್ದ ಎಂದು ತಿಳಿದುಬಂದಿತ್ತು. ಆದ್ರೆ ವೀರೇಂದ್ರನ ವಿರುದ್ಧ ಸೂಕ್ತ ಸಾಕ್ಷಿಗಳು ಲಭ್ಯತೆ ಕಾಡಿದೆ. ಇತ್ತ ಬಂಧಿತನಾಗಿರುವ ಅಮೂಲ್ ಕಾಳೆ ಎಸ್‍ಐಟಿ ಆಧಿಕಾರಿಗಳ ತನಿಖೆಗೆ ಸ್ಪಂದಿಸುತ್ತಿಲ್ಲವಂತೆ. 2015ರಂದು ಧಾರವಾಡದಲ್ಲಿ ವಿಚಾರವಾದಿ, ಚಿಂತಕ ಎಂ.ಎಂ.ಕಲ್ಬುರ್ಗಿಯವರ ಹತ್ಯೆಗೂ ಬಂಧಿತ ಅಮೂಲ್ ಕಾಳೆಗೂ ಸಂಬಂಧವಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *