ಬೆಂಗಳೂರು: ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಅವರ ಅಂತ್ಯಕ್ರಿಯೆ ಚಾಮರಾಜ ಪೇಟೆಯ ರುದ್ರಭೂಮಿ ಟಿಆರ್ ಮಿಲ್ ನಲ್ಲಿ ಬುಧವಾರ ಸಂಜೆ ನಡೆಯಿತು.
ರುದ್ರಭೂಮಿಗೆ ಮೃತ ಶರೀರ ಬಂದ ಬಳಿಕ ಪೊಲೀಸರು ಮೂರು ಸುತ್ತು ಕುಶಾಲು ತೋಪು ಹಾರಿಸಿ ಗೌರವ ಸಲ್ಲಿಸಿದರು. ಯಾವುದೇ ಸಂಪ್ರದಾಯವನ್ನು ನೆರವೇರಿಸದೇ ಹೂವನ್ನು ಇಟ್ಟು ಪಾರ್ಥಿವ ಶರೀರವನ್ನು ಹೂಳಲಾಯಿತು. ಬಳಿಕ ಅವರ ಅಭಿಮಾನಿಗಳು ಕೈಯಲ್ಲಿ ಮಣ್ಣನ್ನು ಹಾಕಿದರು.
Advertisement
ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ರಮೇಶ್ ಕುಮಾರ್, ರಾಮಲಿಂಗಾ ರೆಡ್ಡಿ, ನಟ ಪ್ರಕಾಶ್ ರೈ ಭಾಗವಹಿಸಿದ್ದರು. ಅಂತ್ಯ ಸಂಸ್ಕಾರಕ್ಕೂ ಮೊದಲು ಅಭಿಮಾನಿಯೊಬ್ಬರು ‘ಗೌರಿ ಲಂಕೇಶ್ ಅಮರ್ ರಹೇ’ ‘ಮತ್ತೆ ಹುಟ್ಟಿಬಾ ಗೌರಿ’ ಎಂದು ಘೋಷಣೆ ಕೂಗಿದರು.
Advertisement
ವಿಧಿವಿಧಾನ ಯಾಕಿಲ್ಲ:ಜೀವನದುದ್ದಕ್ಕೂ ಧಾರ್ಮಿಕ ಆಚರಣೆ ಮೇಲೆ ಗೌರಿ ಲಂಕೇಶ್ ನಂಬಿಕೆ ಇಟ್ಟಿರಲಿಲ್ಲ. ಹಾಗಾಗಿ ಕೊನೆ ಕ್ಷಣದಲ್ಲಿ ಅವರ ನಂಬಿದ ತತ್ವಗಳಿಗೆ ಧಕ್ಕೆ ತರದೇ ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸದೇ ಕುಟುಂಬ ಸದಸ್ಯರು ಪಾರ್ಥಿವ ಶರೀರದ ಮೇಲೆ ಹೂಗಳನ್ನು ಇರಿಸಿ ಅಂತ್ಯಸಂಸ್ಕಾರ ನೆರವೇರಿಸಿದರು.
Advertisement
ಮಂಗಳವಾರ ರಾತ್ರಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ಅಂತ್ಯ ಸಂಸ್ಕಾರ ಲಿಂಗಾಯತ ಸಂಪ್ರದಾಯದಂತೆ ನಡೆಯಲಿದೆ ಎನ್ನುವ ಸುದ್ದಿ ಬೆಳಗ್ಗೆ ಮಾಧ್ಯಮಗಳಿಗೆ ಸಿಕ್ಕಿತ್ತು.