ಬೆಂಗಳೂರು: ಸಿಲಿಕಾನ್ ಸಿಟಿಯ ಎಚ್‍ಎಸ್‍ಆರ್ ಲೇ ಔಟ್ (HSR Layout) ನ 7 ನೇ ಸೆಕ್ಟರ್‍ನಲ್ಲಿ ಗ್ಯಾಸ್ ಪೈಪ್‍ಲೈನ್ ಕಟ್ಟಾಗಿ ಭೀಕರ ಸ್ಫೋಟ ಸಂಭವಿಸಿದ ಪರಿಣಾಮ ಮನೆಗಳು ಧ್ವಂಸಗೊಂಡು, ಮೂವರು ಗಂಭೀರ ಗಾಯಗಳಾದ ಘಟನೆ ನಡೆದಿದೆ.
ಅಜ್ಜುಂ(40), ಮುಬಾಷೀರ್, (40) ಹಾಗೂ ಜುಬೇರ್ (26) ಗಾಯಾಳುಗಳು. ಇಬ್ಬರು ಮಹಿಳೆಯರಿಗೆ ಶೇ.30 ರಷ್ಟು ಗಂಭೀರ ಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆ (Victoria Hospital) ಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಶಸ್ತ್ರಚಿಕಿತ್ಸೆ ನಂತ್ರ ಎರಡೂವರೆ ತಿಂಗಳ ಮಗು ಸಾವು – ನಕಲಿ ಡಾಕ್ಟರ್ ವಿರುದ್ಧ ಪ್ರಕರಣ ದಾಖಲು
ಬಿಡಬ್ಲೂಎಸ್‍ಎಸ್ಬಿ ಕಾಮಗಾರಿ ಮಾಡುವ ವೇಳೆ ಗ್ಯಾಸ್ ಪೈಪ್ ಲೈನ್ ಕಟ್ ಆಗಿದೆ. ಪರಿಣಾಮ ಎರಡು ಮನೆಗಳು ಸಂಪೂರ್ಣ ಧ್ವಂಸಗೊಂಡಿವೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಸಿಬ್ಬಂದಿ ವಾಲ್ ಬಂದ್ ಮಾಡಿದ್ದಾರೆ. ಬಳಿಕ ಸಾರ್ವಜನಿಕರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದರು. ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಗೇಲ್ ಗ್ಯಾಸ್ ಅಧಿಕಾರಿಗಳಿಂದ ಬಿಡಬ್ಲೂಎಸ್‍ಎಸ್ಬಿ ಅಧಿಕಾರಿಗಳು ಯಾವುದೇ ಅನುಮತಿ ಪಡೆದಿರಲಿಲ್ವಂತೆ. ಈ ಹಿನ್ನೆಲೆಯಲ್ಲಿ ಗುಂಡಿ ತೆಗೆಯುವ ವೇಳೆ ಗ್ಯಾಸ್ ಲೈನ್ ಕಟ್ ಆಗಿದೆ. ಎರಡು ಮನೆಗಳ ಶೌಚಾಲಯದ ಮೂಲಕ ಗ್ಯಾಸ್ ನುಗ್ಗಿದೆ. ಹೀಗಾಗಿ ಕಾಮಗಾರಿ ಮಾಡುವ ವೇಳೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ಆರೋಪ ಕೇಳಿಬಂದಿದೆ.