ಬೆಂಗಳೂರು: ಗ್ಯಾಸ್ ಗೀಸರ್ ಸೋರಿಕೆಯಿಂದ (Gas Geyser Leak) ತಾಯಿ – ಮಗು ಸಾವನ್ನಪ್ಪಿದ ಘಟನೆ ಗೋವಿಂದರಾಜ ನಗರದಲ್ಲಿ ( Govindaraj Nagara) ನಡೆದಿದೆ.
ಮೃತರನ್ನು ಚಾಂದಿನಿ (26), ಯುವಿ (4) ಎಂದು ಗುರುತಿಸಲಾಗಿದೆ. ಸೋಮವಾರ (ಡಿ.11) ಮಧ್ಯಾಹ್ನ ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥರಾಗಿದ್ದರು. ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸಾಲದ ಸುಳಿಗೆ ಸಿಲುಕಿ ಮಗಳು, ಮೊಮ್ಮಗ ಆತ್ಮಹತ್ಯೆ – ಸಾವು ಕಂಡ ಅಜ್ಜಿ ಹೃದಯಾಘಾತದಿಂದ ಕೊನೆಯುಸಿರು
ಪ್ರತಿದಿನ ದೊಡ್ಡ ಮಗಳನ್ನ ಶಾಲೆಯಿಂದ 4 ಗಂಟೆಗೆ ಕರೆದುಕೊಂಡು ಬರಲು ಚಾಂದಿನಿ ಹೋಗುತ್ತಿದ್ದರು. ಆದರೆ ಸೋಮವಾರ ಮಗಳನ್ನ ಕರೆದುಕೊಂಡು ಬರಲು ಶಾಲೆಗೆ ಹೋಗದ ಕಾರಣ ಶಾಲೆಯಿಂದ ಚಾಂದಿನಿ ಪತಿ ಕಿರಣ್‌ಗೆ ಫೋನ್ ಮಾಡಿದ್ದರು. ಬಳಿಕ ಚಾಂದಿನಿಗೆ ಕರೆ ಮಾಡಿದರೆ ರಿಸೀವ್ ಮಾಡಿರಲಿಲ್ಲ. ಇದರಿಂದ ಕಿರಣ್ ತಮ್ಮನಿಗೆ ಕರೆ ಮಾಡಿ ನೋಡುವಂತೆ ತಿಳಿಸಿದ್ದರು.
ಕಿರಣ್ ತಮ್ಮ ಪ್ರವೀಣ್ ಮನೆಗೆ ಬಂದು ನೋಡಿದಾಗ ಬಾತ್ ರೂಮ್‌ನಲ್ಲಿ ತಾಯಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಗೊತ್ತಾಗಿದೆ. ಗ್ಯಾಸ್ ಗೀಸರ್ ಸೋರಿಕೆಯಿಂದ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಗೋವಿಂದ ರಾಜ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಫೋಟೋಶೂಟ್‌ಗೆ ಹೋದವರು ಮಸಣಕ್ಕೆ – ಮದುವೆಯಾಗಬೇಕಿದ್ದ ಭಾವಿ ದಂಪತಿಯ ದುರಂತ ಅಂತ್ಯ

