ತಿರುವನಂತಪುರಂ: ಮಹಾಮಳೆಗೆ ದೇವರನಾಡು ಕೇರಳ ತತ್ತರಿಸಿ ಹೋಗಿದೆ. ಈಗಾಗಲೇ ನೂರಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಬಲಿಯಾಗಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಎಡಬಿಡದೆ ಭೂಕುಸಿತ ಸಂಭವಿಸುತ್ತಿದ್ದು. ಜನರು ಕಂಗಾಲಾಗಿದ್ದಾರೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಪ್ರವಾಹ ಸಂತ್ರಸ್ತರಿಗೆ ಗಾರ್ಮೆಂಟ್ಸ್ ವ್ಯಾಪಾರಿಯೊಬ್ಬರು ನೆರವಾಗಿ ಮಾನವೀಯತೆ ಮೆರೆದಿದ್ದಾರೆ.
ಪ್ರವಾಹದಿಂದ ಉಂಟಾಗಿರುವ ಅನಾಹುತಗಳಿಂದ ಸಾಕಷ್ಟು ಮಂದಿ ಮನೆಮಠ ಕಳೆದುಕೊಂಡು ಒದ್ದಾಡುತ್ತಿದ್ದಾರೆ. ಸಂತ್ರಸ್ತರ ನೆರವಿಗಾಗಿ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸಲು ರಾಜ್ಯ ಸರ್ಕಾರ ಶಕ್ತಿಮೀರಿ ಪ್ರಯತ್ನ ನಡೆಸುತ್ತಿದೆ. ಇದರ ಜೊತೆಗೆ ಸಾವಿರಾರು ಜನರು ಸ್ವಯಂಪ್ರೇರಿತರಾಗಿ ಪರಿಹಾರ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಅವರಲ್ಲಿ ಎರ್ನಾಕುಲಂನಲ್ಲಿ ಗಾರ್ಮೆಂಟ್ ವ್ಯಾಪಾರಿಯಾಗಿರುವ ನೌಶಾದ್ ಕೂಡ ಒಬ್ಬರಾಗಿದ್ದಾರೆ. ಇವರು ತಮ್ಮ ಅಂಗಡಿಗೆ ಬಂದ ಮಹಿಳೆಯರು ಮತ್ತು ಮಕ್ಕಳ ಸಿದ್ಧ ಉಡುಪುಗಳನ್ನು ನೇರವಾಗಿ ಕೇರಳ ಪ್ರವಾಹ ಸಂತ್ರಸ್ತರಿಗೆ ಕಳುಹಿಸಿಕೊಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
Advertisement
Advertisement
ನೌಶಾದ್ ಅವರು ತಮ್ಮ ಗಾರ್ಮೆಂಟ್ ಗೋಡಾನಿನಲ್ಲಿದ್ದ ಬಟ್ಟೆಗಳನ್ನು ಸಂತ್ರಸ್ತರಿಗೆ ಕಳುಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಎಲ್ಲರ ಮನ ಗೆದ್ದಿದೆ. ನಾವು ಸತ್ತಾಗ ಈ ಜಗತ್ತಿನಿಂದ ಏನನ್ನೂ ಕೊಂಡೊಯ್ಯುವುದಿಲ್ಲ. ನನ್ನ ವ್ಯಾಪಾರದಲ್ಲಿ ಬಂದ ಲಾಭವನ್ನು ಅಗತ್ಯ ಇರುವವರಿಗೆ ನೀಡುತ್ತಿದ್ದೇನೆ. ಇದರಿಂದ ನನಗೆ ನಷ್ಟವಿಲ್ಲ. ಅಗತ್ಯ ಇರುವವರಿಗೆ ಬಟ್ಟೆಗಳನ್ನು ನೀಡುವ ಮೂಲಕ ಬಕ್ರಿದ್ ಹಬ್ಬವನ್ನು ಆಚರಣೆ ಮಾಡುತ್ತಿದ್ದೇನೆ ಎಂದು ನೌಶಾದ್ ವಿಡಿಯೋದಲ್ಲಿ ತಿಳಿಸಿದ್ದಾರೆ.
Advertisement
ವಿಡಿಯೋದಲ್ಲಿ, ನೌಶಾದ್ ಅವರು ಗಾರ್ಮೆಂಟ್ ಗೋಡಾನಿನಲ್ಲಿದ್ದ ಹೊಸ ಬಟ್ಟೆಗಳನ್ನು ದೊಡ್ಡ ದೊಡ್ಡ ಚೀಲಗಳಲ್ಲಿ ತುಂಬಿ ಪ್ರವಾಹ ಸಂತ್ರಸ್ತರಿಗೆ ಕಳುಹಿಸುವ ತಯಾರಿ ಮಾಡುತ್ತಿರುವ ದೃಶ್ಯಗಳು ಸೆರೆಯಾಗಿದೆ.
Advertisement
ವ್ಯಾಪಾರಿಯ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮಲಯಾಳಂ ನಟ ಮಮ್ಮುಟ್ಟಿ, ಜಯಸೂರ್ಯ ನೌಶಾದ್ ಸೇವೆಗೆ ಶ್ಲಾಘಿಸಿದ್ದಾರೆ. ಮತ್ತೊಂದೆಡೆ ಕಲಾವಿದ ಡಾವಿನ್ಸೀ ಸುರೇಶ್ ಅವರು ಕೇವಲ ಬಟ್ಟೆಗಳಿಂದಲೇ ನೌಶಾದ್ ಅವರ ಪೋಟ್ರೇಟ್ ಚಿತ್ರವನ್ನು ರಚಿಸಿ ಗೌರವ ಸಲ್ಲಿಸಿದ್ದಾರೆ.
https://www.facebook.com/rajesh.sharma.3720/videos/2467443179987522/