ಹಾವೇರಿ: ದಿಢೀರ್ ಬೆಳ್ಳುಳ್ಳಿ ದರ ಕುಸಿತ ಕಂಡ ಹಿನ್ನೆಲೆಯಲ್ಲಿ ರಸ್ತೆ ಮತ್ತು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಸುರಿದು ರೈತರು ಪ್ರತಿಭಟನೆ ಮಾಡಿರುವ ಘಟನೆ ಜಿಲ್ಲೆಯ ರಾಣೇಬೆನ್ನೂರು ನಗರದ ಎಪಿಎಂಸಿಯಲ್ಲಿ ನಡೆದಿದೆ.
ರಾಣೇಬೆನ್ನೂರು ನಗರದ ಎಪಿಎಂಸಿಯಲ್ಲಿ ಕಳೆದ ವಾರ ಕ್ವಿಂಟಲ್‍ಗೆ 12,000 ರೂಪಾಯಿ ಬೆಳ್ಳುಳ್ಳಿ ಮಾರಾಟವಾಗಿತ್ತು. ಇವತ್ತು ಕ್ವಿಂಟಲ್‍ಗೆ ಎರಡು ಸಾವಿರ ರೂಪಾಯಿಗೆ ದರ ಕುಸಿದಿದೆ. ಇದರಿಂದ ಆಕ್ರೋಶಗೊಂಡ ರೈತರು ಬೆಳ್ಳುಳ್ಳಿ ಸುರಿದು ಪ್ರತಿಭಟನೆ ಮಾಡಿದರು.
ಪ್ರತಿಭಟನೆ ವೇಳೆ ಬೆಳ್ಳುಳ್ಳಿ ಮಾರಾಟಕ್ಕೆ ಬಂದಿದ್ದ ರೈತನ ತಾಯಿ ನಾಗಮ್ಮ ಅಸ್ವಸ್ಥಗೊಂಡಿದ್ದರು. ತಕ್ಷಣ ಅಸ್ವಸ್ಥ ಮಹಿಳೆಯನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತದೆ.
ಸೂಕ್ತ ದರ ನೀಡುವಂತೆ ರೈತರ ಪಟ್ಟು ಹಿಡಿದು ರಸ್ತೆ ತಡೆ ನಡೆಸಿದ್ದರು. ಆಗ ಮಾಹಿತಿ ತಿಳಿದು ಸ್ಥಳಕ್ಕೆ ರಾಣೇಬೆನ್ನೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ರೈತರ ಜೊತೆ ಮಾತುಕತೆ ನಡೆಸಿದ್ದಾರೆ. ರಾಣೇಬೆನ್ನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.