ಬೆಂಗಳೂರು: ಸದ್ದೇ ಇಲ್ಲದೆ ಚಿತ್ರೀಕರಣಗೊಂಡು ಬಿಡುಗಡೆಯ ಹೊಸ್ತಿಲಲ್ಲಿ ನಿಂತ ಕೆಲ ಚಿತ್ರಗಳು ತನ್ನ ತಾಜಾತನದಿಂದಲೇ ಎಲ್ಲರೂ ತಿರುಗಿ ನೋಡುವಂತೆ ಸದ್ದು ಮಾಡೋದಿದೆ. ಆದರೆ ರೂಪಾ ರಾವ್, ನಿರ್ದೇಶನ ಮಾಡಿರೋ ‘ಗಂಟುಮೂಟೆ’ ಎಂಬ ಚಿತ್ರದ ಮೂಲಕ ಬಿಡುಗಡೆ ಪೂರ್ವದಲ್ಲಿಯೇ ದೇಶ ವಿದೇಶಗಳಲ್ಲಿಯೂ ಕನ್ನಡದ ಘನತೆಯನ್ನು ಮಿನುಗಿಸಿದ್ದಾರೆ. ಮುಂದಿನ ತಿಂಗಳು ಬಿಡುಗಡೆಗೆ ರೆಡಿಯಾಗಿರೋ ಈ ಸಿನಿಮಾ ಈಗಾಗಲೇ ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಆ ಮಟ್ಟಕ್ಕೆ ಸಂಚಲನಕ್ಕೆ ಕಾರಣವಾಗಿರೋ ಗಂಟುಮೂಟೆಯ ಹೂರಣ ಕಂಡ ಪ್ರಖ್ಯಾತ ನಿರ್ದೇಶಕರುಗಳೇ ಅಚ್ಚರಿಗೀಡಾಗಿದ್ದಾರೆ. ಹಲವರು ಸಿನಿಮಾ ಒಂದನ್ನು ಹೀಗೂ ರೂಪಿಸಬಹುದಾ ಎಂಬ ಪ್ರಶ್ನೆಯೊಂದಿಗೆ ಥ್ರಿಲ್ ಆಗಿದ್ದಾರೆ!
Advertisement
ಅಂತಾರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪಡೆದುಕೊಂಡಿದೆ, ಪ್ರದರ್ಶನಗೊಂಡಿದೆ ಅಂದ ಮಾತ್ರಕ್ಕೆ ಇದನ್ನು ಆರ್ಟ್ ಮೂವಿ ಅಂದುಕೊಳ್ಳಬೇಕಿಲ್ಲ. ಈಗಾಗಲೇ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ವೆಬ್ ಸೀರೀಸ್‍ಗಳ ಮೂಲಕ ಗಮನ ಸೆಳೆದಿರುವ, ಹಲವಾರು ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ರೂಪಾ ರಾವ್ ಗಂಟುಮೂಟೆಯನ್ನು ರೂಪಿಸಿರೋ ರೀತಿಯೇ ಅಂಥಾದ್ದಿದೆ. ಅದಾಗ ತಾನೇ ಟೀನೇಜು ಪ್ರವೇಶಿಸೋ ಅಂಚಿನಲ್ಲಿ ನಿಂತು, ಅದರ ಮನೋದೈಹಿಕ ತೊಳಲಾಟಗಳಿಗೆ ಪಕ್ಕಾಗಿರುವ ಮನಸುಗಳ ವಿಚಾರಗಳನ್ನೊಳಗೊಂಡಿರೋ ಪ್ರೇಮಕಥೆಯಾಧಾರಿತವಾದ ಚಿತ್ರ.
Advertisement
Advertisement
ಮಾಮೂಲಿಯಾಗಿ ಇಂಥಾ ಕಥೆಗಳನ್ನು ಹುಡುಗನ ದಿಕ್ಕಿನಿಂದ ನಿರೂಪಣೆ ಮಾಡಲಾಗುತ್ತದೆ. ಆದರೆ ಗಂಟುಮೂಟೆ ಹುಡುಗಿಯ ಕಡೆಯಿಂದಲೇ ಬಿಚ್ಚಿಕೊಳ್ಳುತ್ತದೆ. ಹಾಗಂತ ಇದೇನು ಹೆಣ್ಣುಮಕ್ಕಳ ಶೋಷಣೆಯಂಥಾ ಕಥೆಯನ್ನು ಹೊಂದಿರೋ ಚಿತ್ರ ಅಂದುಕೊಳ್ಳುವಂತಿಲ್ಲ. ಇಲ್ಲಿ ಹೈಸ್ಕೂಲು ದಿನಗಳಲ್ಲಿ ಚಿಗಿತುಕೊಳ್ಳುವ ಮೊದಲ ಪ್ರೇಮದ ನವಿರಾದ ಪುಳಕಗಳಿವೆ. ಹುಡುಗಿಯೊಳಗಿನ ಅನೇಕ ತುಮುಲ, ತೊಳಲಾಟಗಳ ಹೃದಯಸ್ಪರ್ಶಿ ಕಥಾನಕವನ್ನು ಈ ಚಿತ್ರ ಒಳಗೊಂಡಿದೆಯಂತೆ. ಈ ಸಿನಿಮಾದ ಮುಖ್ಯ ಪಾತ್ರದಲ್ಲಿ ನಟ ಪ್ರಕಾಶ್ ಬೆಳವಾಡಿಯವರ ಮಗಳು ತೇಜು ಬೆಳವಾಡಿ ನಿರ್ವಹಿಸಿದ್ದಾರೆ. ತೀರ್ಥಹಳ್ಳಿಯ ಹಳ್ಳಿಯೊಂದರ ಹುಡುಗ ನಿಶ್ವಿತ್ ಮತ್ತೊಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ನಡೆದ ವಿಶೇಷ ಪ್ರದರ್ಶನದಲ್ಲಿ ಈ ಚಿತ್ರವನ್ನು ನೋಡಿದ ಖ್ಯಾತ ನಿರ್ದೇಶಕರೊಬ್ಬರು ಈ ಥರದ ಕಥೆ ಹೊಂದಿರುವ, ನಿರೂಪಣಾ ಶೈಲಿಯ ಚಿತ್ರಗಳನ್ನು ಈವರೆಗೆ ನೋಡಿಲ್ಲ ಎಂಬಂಥಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರಂತೆ. ಇದನ್ನು ನೋಡಿದ ವಿತರಕರೂ ಕೂಡಾ ಇಂಥಾದ್ದೇ ಉದ್ಘಾರವೆತ್ತಿದ್ದಾರೆ.
Advertisement
ಕನ್ನಡದಲ್ಲಿ ಮಹಿಳಾ ನಿರ್ದೇಶಕಿಯರ ಸಂಖ್ಯೆ ಕಡಿಮೆಯಿದೆ. ಎತ್ತಲಿಂದ ಹುಡುಕಿದರೂ ಮಹಿಳಾ ನಿರ್ದೇಶಕಿಯರ ಸಂಖ್ಯೆ ಚಿಕ್ಕದಿದೆ. ಆದರೆ ಆ ಸಾಲಿನಲ್ಲಿ ಗಂಟುಮೂಟೆಯ ನಿರ್ದೇಶಕಿ ರೂಪಾ ರಾವ್ ವಿಶಿಷ್ಟವಾದ ಸ್ಥಾನ ಪಡೆದುಕೊಳ್ಳೋ ಎಲ್ಲ ಸಾಧ್ಯತೆಗಳೂ ಇವೆ. ಯಾಕೆಂದರೆ, ಅವರು ಈ ಸಿನಿಮಾವನ್ನು ರೂಪಿಸಿರೋ ರೀತಿಯೇ ಅಂಥಾದ್ದಿದೆ. ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಕನ್ನಡ ಚಿತ್ರಗಳು ಪ್ರವೇಶ ಪಡೆಯೋದೇ ಸವಾಲಿನ ಸಂಗತಿ. ಅಂಥಾದ್ದರಲ್ಲಿ ನ್ಯೂಯಾರ್ಕ್ ಇಂಡಿಯನ್ ಫಿಲಂ ಫೆಸ್ಟಿವಲ್‍ನ ಪ್ರೀಮಿಯರ್‍ನಲ್ಲಿ ಪ್ರದರ್ಶನ ಕಂಡಿರೋ ಈ ಚಿತ್ರ ಬೆಸ್ಟ್ ಸ್ಕ್ರೀನ್ ಪ್ಲೇ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಕೆನಡಾದಲ್ಲಿ ನಡೆದ ಒಟ್ಟಾವಾ ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿಯೂ ಗಂಟುಮೂಟೆ ಸ್ಪರ್ಧಿಸಿದೆ.
ಇದು ತೊಂಭತ್ತರ ದಶಕದಲ್ಲಿ ನಡೆಯೋ ಕಥೆ ಹೊಂದಿರೋ ಚಿತ್ರ. ಇದರಲ್ಲಿ ಹುಡುಗಿಯ ಪರಿಧಿಯಲ್ಲಿಯೇ ಬಿಚ್ಚಿಕೊಳ್ಳುತ್ತಾ ಆಕೆಯ ಮನೋ ತೊಳಲಾಟಗಳ ಸುತ್ತ ಹೆಣೆದ ವಿಶಿಷ್ಟವಾದ ಪ್ರೇಮ ಕಥೆಯನ್ನೊಳಗೊಂಡಿರೋ ಚಿತ್ರ. ವಿಷ್ಣುವರ್ಧನ ಚಿತ್ರದಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ರೂಪಾ ರಾವ್ ಈ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕಿಯಾಗಿದ್ದಾರೆ. ಇವರು ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ನಿರ್ದೇಶನ ಮಾಡಿರೋ ದ ಅದರ್ ಲವ್ ಸ್ಟೋರಿ ವೆಬ್ ಸೀರೀಸ್ ತುಂಬಾನೇ ಪ್ರಸಿದ್ಧಿ ಪಡೆದುಕೊಂಡಿದೆ. ಈ ವೆಬ್ ಸೀರೀಸ್ ರೂಪಾ ರಾವ್ ಅವರ ಪ್ರತಿಭೆಗೆ, ಭಿನ್ನ ಒಳನೋಟಕ್ಕೆ ಕನ್ನಡಿಯಂತೆಯೂ ಇದೆ.
ಕನ್ನಡ ಚಿತ್ರವೊಂದು ಹೊಸತನದೊಂದಿಗೆ ಬಿಡುಗಡೆಗೆ ಮುನ್ನವೇ ಈ ಪಾಟಿ ಪ್ರಸಿದ್ಧಿ ಪಡೆದುಕೊಂಡಿರೋದು ನಿಜಕ್ಕೂ ಅಪರೂಪದಲ್ಲೇ ಅಪರೂಪದ ಬೆಳವಣಿಗೆ. ಪಕ್ಕಾ ಕಮರ್ಶಿಯಲ್ ಸ್ವರೂಪದ ಈ ಚಿತ್ರ ಪ್ರತೀ ಪ್ರೇಕ್ಷಕರನ್ನೂ ಬೆರಗಾಗಿಸಲಿದೆ ಅನ್ನೋ ಗಾಢವಾದ ಭರವಸೆ ರೂಪಾ ರಾವ್ ಅವರಲ್ಲಿದೆ. ದೇಶಾದ್ಯಂತ ಹೆಸರಾಗಬಲ್ಲ ಮಹಿಳಾ ನಿರ್ದೇಶಕಿಯಾಗಿ ಗುರುತಿಸಿಕೊಳ್ಳೋ ಎಲ್ಲ ಲಕ್ಷಣಗಳನ್ನೂ ಹೊಂದಿರೋ ರೂಪಾ ರಾವ್ ಬಿಡುಗಡೆ ಪೂರ್ವದಲ್ಲಿಯೇ ಕೇಳಿ ಬರುತ್ತಿರೋ ಸದಭಿಪ್ರಾಯಗಳಿಂದ ಮತ್ತಷ್ಟು ಖುಷಿಗೊಂಡಿದ್ದಾರೆ. ಮುಂದಿನ ತಿಂಗಳು ಈ ಸಿನಿಮಾ ತೆರೆಕಾಣಲಿದೆ. ಆ ಮೂಲಕ ಕನ್ನಡಕ್ಕೆ ಏಕಕಾಲದಲ್ಲಿಯೇ ಒಂದೊಳ್ಳೆ ಚಿತ್ರ ಮತ್ತು ಕ್ರಿಯೇಟಿವ್ ನಿರ್ದೇಶಕಿಯ ಆಗಮನವೂ ಆಗಲಿದೆ.