– ಈ ಬಾರಿಯಾದ್ರೂ ಬ್ರೇಕ್ ಬೀಳುತ್ತಾ?
ರಾಯಚೂರು: ಐತಿಹಾಸಿಕ ಅಂಬಾ ಮಠದ ಜಾತ್ರೆಗೆ ಸಕಲ ಸಿದ್ಧತೆ ನಡೆದಿದೆ. ಈ ಜಾತ್ರೆಯಲ್ಲಿ ಗಾಂಜಾ ಓಡಾಟ ಎಗ್ಗಿಲ್ಲದೆ ನಡೆಯುವುದು ಮಾತ್ರ ವಿಪರ್ಯಾಸ. ಇಲ್ಲಿಗೆ ಬರುವ ಸಾಧು-ಸಂತರ ಜೊತೆ ಭಕ್ತರು ಸಹ ಗಾಂಜಾ ನಶೆಯಲ್ಲಿ ತೇಲಾಡುತ್ತಾರೆ. ಹೀಗಾಗಿ ಈ ಬಾರಿಯಾದ್ರೂ ಗಾಂಜಾಗೆ ಬ್ರೇಕ್ ಬೀಳುತ್ತಾ ಎನ್ನುವಂತಾಗಿದೆ.
ರಾಯಚೂರಿನ (Raichuru) ಸಿಂಧನೂರು (Sindhanuru) ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ, ಸುಕ್ಷೇತ್ರ ಸಿದ್ಧಪರ್ವತ ಅಂಬಾಮಠದಲ್ಲಿನ ಅಂಬಾದೇವಿ ದೇವಸ್ಥಾನಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಶುಕ್ರವಾರದಿಂದ (ಜ.2) ಶುರುವಾಗಿರುವ ಅಂಬಾದೇವಿ ಜಾತ್ರೆ ಜನವರಿ 8ರವರೆಗೂ ನಡೆಯಲಿದೆ. ಮಹಾ ರಥೋತ್ಸವ ಪ್ರತಿ ಬಾರಿಯೂ ಅದ್ಧೂರಿಯಾಗಿ ನಡೆಯುತ್ತೆ. ಇವತ್ತು ಮಹಾರಥೋತ್ಸವ ಮತ್ತು ಜಂಬೂ ಸವಾರಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್, ವಿವಿಧ ಸಚಿವರು ಭಾಗವಹಿಸಲಿದ್ದಾರೆ. ಇಂತಹ ಐತಿಹಾಸಿಕ ಜಾತ್ರೆಯಲ್ಲಿ ಪ್ರತೀ ವರ್ಷವೂ ಗಾಂಜಾ ಎಗ್ಗಿಲ್ಲದೇ ಓಡಾಡುವುದು ಈಗಲೂ ವಿಪರ್ಯಾಸವಾಗಿ ಉಳಿದಿದೆ.ಇದನ್ನೂ ಓದಿ: ದೇಶದ ಜಿಡಿಪಿಗಿಂತಲೂ ಹೆಚ್ಚು ಮೌಲ್ಯದ ಚಿನ್ನ ಹೊಂದಿದ್ದಾರೆ ಭಾರತೀಯರು!
ತಾಲೂಕು ಆಡಳಿತ ಎಷ್ಟೇ ಎಚ್ಚರಿಕೆ ನೀಡಿದರೂ ಕ್ರಮ ಕೈಗೊಂಡರೂ ಗಾಂಜಾ ಬಳಕೆ, ಸಾಗಣೆ, ಮಾರಾಟ ನಿಲ್ಲುವುದೇ ಇಲ್ಲ. ರಾಜ್ಯ, ದೇಶ ಸೇರಿ ವಿವಿಧೆಡೆಯಿಂದ ಬರುವ ಸಾಧು ಸಂತರಿಗಾಗಿ ಭಕ್ತರು ಗಾಂಜಾ ನೈವೇದ್ಯ ಕೊಡುತ್ತಾರೆ. ಸಾಧುಗಳ ಜೊತೆ ಭಕ್ತರು ಸಹ ಗಾಂಜಾ ನಶೆಯಲ್ಲಿ ತೇಲಾಡ್ತಾರೆ. ಹೀಗಾಗಿ ಈ ಜಾತ್ರೆ ಗಾಂಜಾ ಜಾತ್ರೆಯಾಗೇ ಕಾಣಿಸಿಕೊಳ್ಳುತ್ತಿದೆ. ಜನವರಿ 8ರವರೆಗೂ ಪ್ರಾಣಿಬಲಿ ನಿಷೇಧ ಮಾಡಿ, ಜಿಲ್ಲಾಧಿಕಾರಿಗಳು ಆದೇಶವನ್ನು ಹೊರಡಿಸಿದ್ದಾರೆ. ಸಾರ್ವಜನಿಕರು, ಪ್ರಾಣಿಪ್ರಿಯರು ಪ್ರಾಣಿಬಲಿ ನಡೆಯದಂತೆ ಎಚ್ಚರಿಕೆ ವಹಿಸಲು ಆಗ್ರಹಿಸಿದ್ದಾರೆ. ತಾಲೂಕು ಆಡಳಿತವೂ ಈ ಬಾರಿ ಅಲರ್ಟ್ ಆಗಿದೆ.
ಸಿಂಧನೂರು ತಾಲೂಕಿನಲ್ಲಿ ಇತ್ತೀಚಿಗೆ 37 ಗಾಂಜಾ ಪ್ರಕರಣಗಳು ದಾಖಲಾಗಿದ್ದು, ಜಾತ್ರಾ ಸಮಯದಲ್ಲಿ ಪ್ರಕರಣ ತಡೆಯಲು ಪೊಲೀಸ್ ಇಲಾಖೆ ಮುಂದಾಗಿದೆ. ಪೊಲೀಸರಿಗೆ ಸಂಪೂರ್ಣ ಅಧಿಕಾರವಿದ್ದು, ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡಲ್ಲ. ಜಾತ್ರೆಯಲ್ಲಿ ನಡೆಯುವ ಗಾಂಜಾ ಓಡಾಟಕ್ಕೆ ಬ್ರೇಕ್ ಹಾಕಲೇಬೇಕಿದೆ ಅಂತ ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಹೇಳಿದ್ದಾರೆ. ನಿಷೇಧಿತ ಮಾದಕ ವಸ್ತುಗಳ ಮಾರಾಟ, ಸಾಗಣೆ ಕಾನೂನು ಬಾಹಿರವಾಗಿದ್ದರೂ ಜಾತ್ರೆಯಲ್ಲಿ ರಾಜಾರೋಷವಾಗಿ ಗಾಂಜಾ ಬಳಕೆಯಾಗುತ್ತಲೇ ಬಂದಿದೆ. ಕನಿಷ್ಠ ಈ ವರ್ಷವಾದ್ರೂ ಐತಿಹಾಸಿಕ ಅಂಬಾದೇವಿ ಜಾತ್ರೆಯಲ್ಲಿ ಮಾದಕ ವಸ್ತುಗಳ ಬಳಕೆಗೆ ಬ್ರೇಕ್ ಬೀಳುತ್ತಾ ನೋಡಬೇಕಿದೆ.ಇದನ್ನೂ ಓದಿ: Video | ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಮುಂದೂಡಿಕೆ

