ತಿಹಾರ್ ಜೈಲಿನಲ್ಲಿ ಗ್ಯಾಂಗ್‌ಸ್ಟರ್ ಹತ್ಯೆ ಪ್ರಕರಣ – ತಮಿಳುನಾಡಿನ 7 ಪೊಲೀಸರು ಸಸ್ಪೆಂಡ್

Public TV
2 Min Read
tillu tajpuria TIHAR JAIL

ನವದೆಹಲಿ: ತಿಹಾರ್ ಜೈಲಿನಲ್ಲಿ (Tihar Jail) ಗ್ಯಾಂಗ್‌ಸ್ಟರ್ (Gangster) ಟಿಲ್ಲು ತಾಜ್‌ಪುರಿಯಾನನ್ನು (Tillu Tajpuriya) ಸಹ ಕೈದಿಗಳು ಇರಿದು ಹತ್ಯೆಗೈದ ಸಂದರ್ಭ ಕರ್ತವ್ಯದಲ್ಲಿದ್ದ ತಮಿಳುನಾಡು ವಿಶೇಷ ಪೊಲೀಸ್‌ನ (TNSP) 7 ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಸಹ ಕೈದಿಗಳು ಟಿಲ್ಲು ತಾಜ್‌ಪುರಿಯಾ ಮೇಲೆ ಹಲ್ಲೆ ನಡೆಸಿ, ಇರಿದು, ಬರ್ಬರವಾಗಿ ಹತ್ಯೆ ನಡೆಸಿದ್ದು, ಇವೆಲ್ಲವನ್ನೂ ನೋಡುತ್ತ ಮೂಕಪ್ರೇಕ್ಷಕರಂತೆ ನಿಂತಿದ್ದ ಆರೋಪದ ಮೇಲೆ ತಮಿಳುನಾಡಿನ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಅವರನ್ನು ತಮಿಳುನಾಡಿಗೆ ವಾಪಸ್ ಕಳುಹಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

Tillu Tajpuriya

ಟಿಲ್ಲು ತಾಜ್‌ಪುರಿಯಾ ಹತ್ಯೆ ಬಳಿಕ ದೆಹಲಿ ಕಾರಾಗೃಹಗಳ ಮಹಾನಿರ್ದೇಶಕ ಸಂಜಯ್ ಬೇನಿವಾಲ್ ತನ್ನ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಪೊಲೀಸರಿಗೆ ಪತ್ರ ಬರೆದಿದ್ದರು. ಅದರಂತೆ ತಮ್ಮ ಸಿಬ್ಬಂದಿಯ ಆಪಾದಿತ ನಿರ್ಲಕ್ಷ್ಯದ ಬಗ್ಗೆ ಟಿಎನ್‌ಎಸ್‌ಪಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಿಲ್ಲು ತಾಜ್‌ಪುರಿಯಾ ಯಾರು?
2021ರಲ್ಲಿ ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ಗ್ಯಾಂಗ್‌ಸ್ಟರ್ ಜಿತೇಂದರ್ ಗೋಗಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಗುಂಡು ಹಾರಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಪ್ರತಿದಾಳಿ ನಡೆಸಿ ಕೊಂದಿದ್ದರು. ಈ ಪ್ರಕರಣದಲ್ಲಿ ಗುಂಡು ಹಾರಿಸುವಂತೆ ಸೂಚನೆ ನೀಡಿದ್ದ ತಾಜ್‌ಪುರಿಯಾ ಪ್ರಮುಖ ಆರೋಪಿಯಾಗಿದ್ದು, ಜೈಲು ಸೇರಿದ್ದ.

POLICE JEEP 1

ಜಿತೇಂದರ್ ಗೋಗಿ ಗ್ಯಾಂಗ್ ಹಾಗೂ ಟಿಲ್ಲು ಗ್ಯಾಂಗ್ ನಡುವೆ ಹಲವು ವರ್ಷಗಳಿಂದಲೇ ದ್ವೇಷವಿತ್ತು. ಜೈಲಿನೊಳಗೆ ಟಿಲ್ಲುನನ್ನು ಹತ್ಯೆಗೈದ ಆರೋಪಿಗಳು ಗೋಗಿ ಗ್ಯಾಂಗ್‌ನವರು ಎನ್ನಲಾಗಿದೆ. ಇದನ್ನೂ ಓದಿ: ದೋಣಿ ದುರಂತ- ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ಕೇರಳ ಸರ್ಕಾರ

ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತಿಹಾರ್ ಜೈಲಿನ ಸಿಸಿಟಿವಿ ವೀಡಿಯೋಗಳು ಹರಿದಾಡಿವೆ. ಅದರಲ್ಲಿ ಕೈದಿಗಳು ಭದ್ರತಾ ಸಿಬ್ಬಂದಿಯ ಮುಂದೆಯೇ ದಾಳಿ ನಡೆಸುತ್ತಿದ್ದುದು ಕಂಡುಬಂದಿದೆ. ತಾಜ್‌ಪುರಿಯಾಗೆ ಚೂರಿಯಿಂದ ಇರಿದ ಬಳಿಕ ಸಿಬ್ಬಂದಿ ಆತನನ್ನು ಅಲ್ಲಿಂದ ಕರೆದುಕೊಂಡು ಹೋಗಿರುವುದು ಕಾಣಿಸಿಕೊಂಡಿದೆ.

ಇದೀಗ ತಮಿಳುನಾಡು ಪೊಲೀಸರು ತನ್ನ 7 ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ ಹಾಗೂ ರಾಜ್ಯಕ್ಕೆ ಕರೆಸಿಕೊಂಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌ ಜೈಲುಗಳಲ್ಲಿದ್ದಾರೆ 654 ಭಾರತೀಯ ಮೀನುಗಾರರು; ಶುಕ್ರವಾರ 199 ಮಂದಿ ರಿಲೀಸ್‌

Share This Article