ವಾಷಿಂಗ್ಟನ್: ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ನ (Lawrence Bishnoi) ಸಹೋದರ ಅನ್ಮೋಲ್‌ನನ್ನು (Anmol Bishnoi) ಭಾರತಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಮೆರಿಕ (America) ಬಂಧಿಸಿಲ್ಲ. ಸ್ಥಳೀಯ ಕಾರಣದಿಂದ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅನ್ಮೋಲ್ ಬಿಷ್ಣೋಯ್ ದಾಖಲೆಗಳಲ್ಲಿ ಕೆಲವು ಸಮಸ್ಯೆಗಳು ಕಂಡುಬಂದಿವೆ. ಆತ ಇನ್ನೂ ಪೊಲೀಸರ ವಶದಲ್ಲಿ ಇದ್ದಾನೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಆತನನ್ನು ಕಳೆದ ಗುರುವಾರ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊದಲ್ಲಿ ಬಂಧಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
2022 ರಲ್ಲಿ ನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ, ಕಳೆದ ತಿಂಗಳು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆ ಪ್ರಕರಣ, ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳಲ್ಲಿ ಅನ್ಮೋಲ್ ಬೇಕಾಗಿದ್ದಾನೆ.
ಈ ತಿಂಗಳ ಆರಂಭದಲ್ಲಿ ಮುಂಬೈ ಪೊಲೀಸರ (Mumbai Police) ಅಪರಾಧ ವಿಭಾಗವು ಅನ್ಮೋಲ್‌ನನ್ನು ಯುಎಸ್‌ನಿಂದ ಮರಳಿ ಕರೆತರಲು ಹಸ್ತಾಂತರ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಆತನ ಬಂಧನಕ್ಕೆ ಮಹಾರಾಷ್ಟ್ರದ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ ಸಹ ಜಾರಿ ಮಾಡಿದೆ. ಜಾಗತಿಕ ಕಾನೂನು ಜಾರಿ ಸಂಸ್ಥೆ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಸಹ ಜಾರಿ ಮಾಡಿದೆ.
ಪಂಜಾಬ್‌ನ ಫಾಜಿಲ್ಕಾ ಮೂಲದ ಅನ್ಮೋಲ್ ಬಿಷ್ಣೋಯ್, ನಕಲಿ ಪಾಸ್‌ಪೋರ್ಟ್ ಬಳಸಿ ಭಾರತದಿಂದ ಪಲಾಯನ ಮಾಡಿದ ನಂತರ ಕೆನಡಾದಲ್ಲಿದ್ದ ಎಂದು ಈ ಹಿಂದೆ ನಂಬಲಾಗಿತ್ತು. ಆತ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ ಎರಡು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಎನ್‌ಐಎ ಆತನನ್ನು ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರಿಸಿದ್ದು, ಆತನ ಬಂಧನಕ್ಕೆ 10 ಲಕ್ಷ ರೂ. ಬಹುಮಾನ ಘೋಷಿಸಿತ್ತು.
ಸಿಧು ಮೂಸೆವಾಲಾ ಹತ್ಯೆ ಹಿಂದಿದ್ದ ಅನ್ಮೋಲ್
18 ಪ್ರಕರಣಗಳಲ್ಲಿ ಆರೋಪಿ ಆಗಿರುವ ಅನ್ಮೋಲ್ ಸಿಧು ಮೂಸೆವಾಲಾ ಹತ್ಯೆ ಕೇಸ್‌ನಲ್ಲೂ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಈತ ಮೂಸೆವಾಲಾ ಹತ್ಯೆಗೆ ಆಮದು ಮಾಡಿಕೊಂಡ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದ್ದ. ಅಲ್ಲದೇ ಬಾಬಾ ಸಿದ್ದಿಕಿ ಹತ್ಯೆಗೆ ಬಳಸಲಾಗಿದ್ದ ಟರ್ಕಿ ನಿರ್ಮಿತ ಟಿಟಾಸ್ ಪಿಸ್ತೂಲ್ ಮತ್ತು ಗ್ಲೋಕ್ ಬಂದೂಕು ಒದಗಿಸಿದ್ದು ಇವನೇ ಎಂಬ ಆರೋಪ ಇದೆ.